ಬಂಟ್ವಾಳ : ಅವಧಿ ಮುಗಿದ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿಗೆ ಚುನಾವಣೆ ಹಾಗೂ ವಿವಿಧ ಕಾರಣದಿಂದಾಗಿ ತೆರವಾದ ಎರಡು ಗ್ರಾಮಪಂಚಾಯತಿಗಳ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆ ಫೆ.25 ರಂದು ನಡೆಯಲಿದೆ.
ಪ್ರಮುಖವಾಗಿ ಬಂಟ್ವಾಳ ತಾಲೂಕಿನ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ ಪುದು ಗ್ರಾಮ ಪಂಚಾಯತಿ 34 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರ ಜೊತೆಗೆ ತಾಲೂಕಿನ ಅನಂತಾಡಿ ಹಾಗೂ ನೆಟ್ಲಮುಡ್ನೂರು ಗ್ರಾಮ ಪಂಚಾಯತಿಗಳಲ್ಲಿ ತೆರವಾದ ತಲಾ ಒಂದೊಂದು ಸ್ಥಾನಗಳಿಗೆ ಉಪ ಚುನಾವಣೆಯು ಅದೇ ದಿನ ನಡೆಯಲಿದೆ.
ಫೆ.14ನಾಮಪತ್ರ ಸಲ್ಲಿಕೆಗೆ ಕೊನೆದಿನ:
ಫೆ.8 ಬುಧವಾರ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆ.14 ಕೊನೆ ದಿನವಾಗಿದೆ. ಫೆ.15 ನಾಮಪತ್ರದ ಪರಿಶೀಲನೆ ಡೆಯುವುದು. ಫೆ.17 ನಾಮಪತ್ರ ವಾಪಾಸ್ ಪಡೆಯಲು ಕೊನೆದಿನವಾಗಿದೆ. ಫೆ.25 ರಂದು ಶನಿವಾರ ಚುನಾವಣೆ ನಡೆಯಲಿದ್ದು, ಅಗತ್ಯ ಬಿದ್ದರೆ ಫೆ. 27 ಮರುಮತದಾನ ನಡೆಯಲಿದೆ. ಫೆ.28ರಂದು ಮತ ಎಣಿಕೆ ನಡೆಯುವುದು.
ಪುದು ಗ್ರಾ.ಪಂ.ವ್ಯಾಪ್ತಿಯಲ್ಲಿ 10 ವಾರ್ಡ್ ಗಳನ್ನೊಳಗೊಂಡಿದ್ದು, ಒಟ್ಟು 34 ಸದಸ್ಯ ಬಲವನ್ನು ಹೊಂದಿದೆ. ಈಗಾಗಲೇ ಪ್ರಕಟಿತ ಮೀಸಲಾತಿಗನುಗಣವಾಗಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ.
ಪುದು ಪಂಚಾಯತಿ ಒಂದೊಮ್ಮೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಬೇಕೆಂಬ ಪ್ರಸ್ತಾಪವಿತ್ತಾದರೂ ಜನಸಂಖ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಅದಿನ್ನು ಕನಸಾಗಿಯೇ ಉಳಿದಿದೆ.
ಪುದು ಗ್ರಾ.ಪಂ.ನಲ್ಲಿ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರು 27 ಮಂದಿ ಸದಸ್ಯರಿದ್ದರೆ,ಬಿಜೆಪಿ ಬೆಂಬಲಿತರು 6, ಎಸ್ ಡಿಪಿ ಐ 1ಬೆಂಬಲಿತ ಸದಸ್ಯರಿದ್ದರು.
ಕಳೆದ ಚುನಾವಣೆಯಲ್ಲಿ ಮತಯಂತ್ರದ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು, ಈ ಚುನಾವಣೆ ಅದೇ ಮಾದರಿಯಲ್ಲಿ ನಡೆಯುತ್ತಾ? ಅಥವಾ ಬ್ಯಾಲೆಟ್ ಪೇಪರ್ ಮೂಲಕ ನಡೆಯುತ್ತಾ ಎಂಬುದಿನ್ನು ಸ್ಪಷ್ಟವಾಗಿಲ್ಲ
ಪುದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2011 ರ ಜನಗಣತಿಯ ಪ್ರಕಾರ ಒಟ್ಟು 13533 ಜನಸಂಖ್ಯೆಯಿದ್ದು, ಇದರಲ್ಲಿ 6726 ಮಂದಿ ಪುರುಷರು,6807 ಮಂದಿ ಮಹಿಳೆಯರು ಮತದಾರರಿದ್ದಾರೆ. ಫರಂಗೀಪೇಟೆಯಂತ ನಗರ ಪ್ರದೇಶ ಸಹಿತ ಗ್ರಾಮೀಣ ಭಾಗವನ್ನು ಪುದು ಗ್ರಾ.ಪಂ.ಹೊಂದಿದೆ.ಪಕ್ಷದ ಚಿಹ್ನೆಯಡಿ ಗ್ರಾ.ಪಂ.ಚುನಾವಣೆ ನಡೆಯದಿದ್ದರೂ ಎಲ್ಲಾ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ,ಚುನಾವಣೆಯನ್ನು ಎದುರಿಸುತ್ತಾರೆ.
ಉಪಚುನಾವಣೆ
ಬಂಟ್ವಾಳ ತಾಲೂಕಿನ ಅನಂತಾಡಿ ಹಾಗೂ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಗಳಲ್ಲಿ ತೆರವಾದ ತಲಾ ಒಂದೊಂದು ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು,
ಅನಂತಾಡಿ ಗ್ರಾಮ ಪಂಚಾಯತಿ ಸದಸ್ಯೆ ಮಮತಾ ಅವರು ಸರಕಾರಿ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿರುವ ಹಿನ್ನಲೆಯಲ್ಲಿ ಗ್ರಾ.ಪಂ. ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು,ತೆರವಾದ ಈ ಸ್ಥಾನಕ್ಕೆ ಹಾಗೂ ನೆಟ್ಲಮುಡ್ನೂರು ಗ್ರಾಮಪಂಚಾಯತಿನ ಸದಸ್ಯೆಯಾಗಿದ್ದ ರೇಖಾ ಅವರು ನಿಧನರಾದ ಹಿನ್ನಲೆಯಲ್ಲಿ ತೆರವಾದ ಈ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.