
ಬಂಟ್ವಾಳ: ಇಲ್ಲಿನ ಬಂಟ್ವಾಳ ತಾಲೂಕು ಹಿಂದಿ ಭಾಷ ಶಿಕ್ಷಕ ಸಂಘದ ಆಶ್ರಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಸಹಯೋಗದೊಂದಿಗೆ ಹಿಂದಿ ಭಾಷ ಶಿಕ್ಷಕ ಸಮಾವೇಶ ಬಿ.ಸಿ.ರೋಡಿನ ಬಿ.ಎ. ಸೋಮಯಾಜಿ ರೋಟರಿ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಉದ್ಘಾಟಿಸಿದರು. ಅವರು ಮಾತನಾಡಿ ಹಿಂದಿ ಭಾಷೆ ಕಲಿತರ ದೇಶದ ಎಲ್ಲಾ ಕಡೆಗೂ ಸಂಚರಿಸಬಹುದಾಗಿದೆ. ಲೋಕಸಭೆ ರಾಜ್ಯಸಭೆಯಲ್ಲಿ ಚರ್ಚೆಗಳು ಹಿಂದಿ ಭಾಷೆಯಲ್ಲಿಯೆ ನಡೆಯುತ್ತದೆ. ಹಿಂದಿ ಭಾಷ ಸಂಘದ ವತಿಯಿಂದ ರಚಿತವಾದ ಹಿಂದಿ ಅಭ್ಯಾಸ ಪುಸ್ತಕದಿಂದ ಎಸ್ ಎಲ್ ಎ ಸಿ ಯಲ್ಲಿ ಅತ್ಯಧಿಕ ಅಂಕಗಳು ಬಂದಿದೆ.ಇದರಿಂದ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯ ಆಗಿದೆ ಎಂದರು.

ಪಾಣೆಮಂಗಳೂರಿನ ಎಸ್ ಎಲ್ ಎಂ. ಪಿ. ಶಾಲೆಯ ಹಿಂದಿ ಶಿಕ್ಷಕ ಪಂಚಾಕ್ಷರಿ ಯವರಿಗೆ ಹಿಂದಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಬಂಟ್ವಾಳ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೋ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹಿಂದಿ ಶಿಕ್ಷಕರಿಗೆ ತೊಂದರೆಯಾಗುವುದಿಲ್ಲ, ಹಿಂದಿ ಶಿಕ್ಷಕರು ಆತಂಕ ಪಡುವುದು ಬೇಡ ಎನ್ನುವ ಮಾಹಿತಿ ಸಂಘದಿಂದ ಸಿಕ್ಕಿದೆ. ಅತ್ಯಂತ ವ್ಯವಸ್ಥಿತವಾಗಿ ಬಂಟ್ವಾಳ ತಾಲೂಕಿನಲ್ಲಿ ಹಿಂದಿ ದಿನಾಚರಣೆಯನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು. ಬಂಟ್ವಾಳ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ಗೌರಿ ಮಾಧವ ಶೆಣೈ ಮಾತನಾಡಿ ಹಿಂದಿ ಭಾಷೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದೆ. ಹಿಂದಿ ಭಾಷೆ ಮಾತನಾಡುವ ಮೂಲಕ ಕೇವಲ ಒಂದು ದಿನ ಮಾತ್ರವಲ್ಲ ಪ್ರತೀ ದಿನ ಹಿಂದಿ ದಿವಸ ಆಚರಿಸಬೇಕಾಗಿದೆ ಎಂದರು.

ಈ ಸಂದರ್ಭ ಮೂರು ಮಂದಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಂಟ್ವಾಳ ತಾಲೂಕಿನಲ್ಲಿ ಹಿಂದಿ ಭಾಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಯ ಶಿಕ್ಷಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಬಸ್ತಿ ಮಾಧವ ಶೆಣೈ ಮಾತನಾಡಿ ತನ್ನ ನೆನೆಪುಗಳನ್ನು ಮೆಲುಕು ಹಾಕಿದರು.
ಜಿಲ್ಲಾಧ್ಯಕ್ಷೆ ಗೀತಾ ಕುಮಾರಿ ಮಾತನಾಡಿ ತ್ರಿಭಾಷ ನೀತಿ ಜಾರಿಯಾಗಲು ನಾವೆಲ್ಲರೂ ಸಂಘಟಿತ ಪ್ರಯತ್ನ ನಡೆಸಬೇಕೆಂದರು.
ಸಂಘದ ಗೌರವಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಅಭ್ಯಾಸ ಪುಸ್ತಕದ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಶಂಕರ ವೆಂಕಪ್ಪ ಪಾವಸ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆ ಇನ್ನಷ್ಟು ಬಲಪಡಿಸಲು ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಗೌರವಾಧ್ಯಕ್ಷ ರಮಾನಂದ ನೂಜಿಪ್ಪಾಡಿ ಸ್ವಾಗತಿಸಿ, ಕೋಶಾಧಿಕಾರಿ ಧನರಾಜ್ ವರದಿ ವಾಚಿಸಿದರು. ಶಿಕ್ಷಕಿ ಶಾಂತ ವಂದಿಸಿದರು. ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯರಾಂ ಹಾಗೂ ಪದಾಧಿಕಾರಿಗಳು ಸಹಕರಿಸಿದರು.
Advertisement







