
ಕುಪ್ಪೆಪದವು: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ರಾಜನ್ ದೈವ ಶ್ರೀ ಕೊಡಮಣಿತ್ತಾಯ ಹಾಗೂ ಮಹಿಸಂತಾಯ ಮತ್ತು ಪರಿವಾರ ದೈವಗಳಿಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ಕುಪ್ಪೆಪದವಿನ ಪಡಿಲ್ಪದವು ಮೂಡಾಯಿಗಡಿಯಲ್ಲಿ ಪುರಾತನ ವೈಭವದಿಂದ ನಡೆದುಕೊಂಡು ಬರುತ್ತಿದ್ದ ದೊಂಪದ ಬಲಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ನೇಮೋತ್ಸವಕ್ಕಿಂತ ಪೂರ್ವಭಾವಿಯಾಗಿ ನೇಮೋತ್ಸವ ನಡೆಯುವ ಸ್ಥಳಕ್ಕೆ ದೈವದ ಭಂಡಾರ ಬರುವುದು ಅತ್ಯಂತ ವಿಶೇಷವಾಗಿತ್ತು. ಕಿಲೆಂಜಾರು ಅರೆಮನೆಯಿಂದ ಶ್ರೀ ಕೊಡಮಣಿತ್ತಾಯ, ಮಹಿಸಂತಾಯ ಸಹಿತ ಪರಿವಾರ ದೈವಗಳ ಭಂಡಾರವೂ ಕೊಂಬು, ವಾದ್ಯದ ಹಿಮ್ಮೆಳದೊಂದಿಗೆ ಪಲ್ಲೆಕಿಯಲ್ಲಿ ಹೊರಟು, ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಬರುವ ದೃಶ್ಯ ಅಪೂರ್ವವಾದುದು. ರಸ್ತೆಯನ್ನು ನೀರಿನಿಂದ ಶುಚಿಗೊಳಿಸಿ, ಅಲ್ಲಲ್ಲಿ ಧರಿಗಳನ್ನು ನಿರ್ಮಿಸಿ ಹಣತೆಯ ದೀಪಗಳನ್ನು ಹಚ್ಚಿ, ಗುತ್ತು, ಬಾಳಿಕೆಯವರು, ಗ್ರಾಮಸ್ಥರು ಗ್ರಾಮ ದೈವದ ಭಂಡಾರವನ್ನು ಭಕ್ತಿ ಶ್ರದ್ದೆಯಿಂದ ಸ್ವಾಗತಿಸುವ ಸಂಪ್ರದಾಯ ವಿಶೇಷವಾದುದು. ಕುಪ್ಪೆಪದವು ಮುಖ್ಯ ರಸ್ತೆಗೆ ಭಂಡಾರ ಬರುವ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಾರೆ. ಅಲ್ಲಿಂದ ನೇಮೋತ್ಸವ ನಡೆಯುವ ಸ್ಥಳಕ್ಕೆ ತೆರಳಿ ಭಂಡಾರ ಏರಿ ದೈವದ ದೊಂಪದ ಬಲಿ ನೇಮೋತ್ಸವ ನಡೆಯುವುದು ವಾಡಿಕೆ. ಈ ಸಂದರ್ಭ ಕಿಲೇಂಜಾರು ಅರಮನೆಯ ದಿನೇಶ್ ಕುಮಾರ್ ಬಳ್ಳಾಲ್, ಗುತ್ತು, ಬಾಳಿಕೆಯವರು, ನೇಮೋತ್ಸವ ಸಮಿತಿಯ ಪ್ರಮುಖರು, , ಊರ ಪರವೂರ ಭಕ್ತರು, ಉಪಸ್ಥಿತರಿದ್ದು ದೈವದ ಸಿರುಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.
—
Advertisement







