

ಬಂಟ್ವಾಳ: ಕಾರ್ಮಿಕರ ಕೊರತೆ, ಅಕಾಲಿಕ ಮಳೆ, ಪ್ರಾಣಿ, ಪಕ್ಷಿಗಳ ಕಾಟ, ಸರಕಾರದ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆಯ ಕೊರತೆಯಿಂದ ತುಳುನಾಡಿನಲ್ಲಿ ಹೆಕ್ಟೇರ್ಗಟ್ಟಲೆ ಭತ್ತ ಬೇಸಾಯದ ಗದ್ದೆಗಳು ಹಡಿಲು ಬೀಳುತ್ತಿವೆ. ಇನ್ನೂ ಹಲವು ಗದ್ದೆಗಳು ಅಡಿಕೆ ತೋಟಗಳಾಗಿ ಬದಲಾಗಿವೆ. ಇಂತಹ ಕಾಲಘಟ್ಟದಲ್ಲಿ ಲಾಭದ ಉದ್ದೇಶವಿಲ್ಲದೆ, ತುಳುನಾಡಿನ ಸಾಂಪ್ರದಾಯಿಕ ಭತ್ತದ ಬೇಸಾಯವನ್ನು ಉಳಿಸಿ ಬೆಳೆಸಬೇಕೆನ್ನುವ ಸದುದ್ದೇಶದಿಂದ ಮಹಿಳೆಯೊಬ್ಬರು ಕಳೆದ ಹಲವು ವರ್ಷಗಳಿಂದ ಭತ್ತದ ಬೇಸಾಯ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಮಂಗಳೂರು ತಾಲೂಕು ವ್ಯಾಪ್ತಿಯ ಕುಪ್ಪೆಪದವು ಬಳಿಯ ನೋಣಾಲುವಿನ ಪ್ರತಿಭಾ ಹೆಗ್ಡೆ ಕಳೆದ ಹಲವು ವರ್ಷಗಳಿಂದ ತಮ್ಮ ಗದ್ದೆಯ ಜೊತೆಗೆ ಇತರ ಗದ್ದೆಗಳಲ್ಲೂ ಬೇಸಾಯ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಕುಳವೂರು ಗುತ್ತಿನ ಸದಾನಂದ ಶೆಟ್ಟಿ ಎಂಬವರಿಗೆ ಸೇರಿದ ಮೂರುವರೆ ಎಕರೆ ವಿಸ್ತೀರ್ಣದ ವಿಶಾಲವಾದ ಕಂಬಳ ಗದ್ದೆಯಲ್ಲಿ ಭತ್ತದ ಸಾಗುವಳಿ ಮಾಡಿದ್ದಾರೆ. ಬಿಳಿ ಜಯ ತಳಿಯ ನೇಜಿಯನ್ನು ನಾಟಿ ಮಾಡಲಾಗಿದ್ದು ಇನ್ನೂ ಎರಡೂವರೆ ಎಕರೆ ಗದ್ದೆಯಲ್ಲಿ ಎಣೆಲು ಸಾಗುವಳಿ ಮಾಡುವ ಸಿದ್ಧತೆಯಲ್ಲಿದ್ದಾರೆ.
ರಾಯಚೂರಿನ ಕಾರ್ಮಿಕರು:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ರೈತರಿಗೆ ಭತ್ತದ ಸಾಗುವಳಿ ಮಾಡಬೇಕೆನ್ನುವ ಇಚ್ಚೆ ಇದ್ದರೂ ಕಾರ್ಮಿಕರ ಕೊರತೆಯಿಂದಾಗಿ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಇದೀಗ ರಾಯಚೂರಿನ ಕೃಷಿ ಕಾರ್ಮಿಕರ ತಂಡವೊಂದು ಬೇಸಾಯ ಮಾಡುವ ಕೃಷಿಕರಿಗೆ ವರದಾನವಾಗಿದ್ದಾರೆ. ತಂಡದಲ್ಲಿ 6 ಮಂದಿ ಕಾರ್ಮಿಕರಿದ್ದು ಬೆಳಿಗ್ಗೆ 6.30ಕ್ಕೆ ಕೆಲಸ ಆರಂಭಿಸುತ್ತಾರೆ. ತಾವೇ ನೇಜಿ ಕಿತ್ತು ಬಳಿಕ ನಾಟಿ ಮಾಡುತ್ತಾರೆ. ದಿನವೊಂದಕ್ಕೆ ಎರಡೂವರೆ ಎಕರೆ ವಿಸ್ತೀರ್ಣ ಗದ್ದೆಯ ನೇಜಿ ತೆಗೆದು ನಾಟಿ ಮಾಡುತ್ತಾರೆ, ಉಪಾಹಾರದೊಂದಿಗೆ ಮಧ್ಯಾಹ್ನದ ಊಟ ಸೇರಿ ಎಕರೆಗೆ ೫ ಸಾವಿರ ರೂಪಾಯಿ ಇವರ ವೇತನ. ತಮ್ಮ ಕೆಲಸ ಪೂರ್ಣಗೊಳಿಸಲು ಈ ಕಾರ್ಮಿಕರು ರಾತ್ರಿ ೭.೩೦ರವರೆಗೂ ಗದ್ದೆಯಲ್ಲಿ ದುಡಿಯುತ್ತಾರೆ. ಕುಳವೂರು ಗುತ್ತಿನ ಕಂಬಳ ಗದ್ದೆಯಲ್ಲೂ ಇದೇ ಕಾರ್ಮಿಕರು ಕೃಷಿ ಕಾರ್ಯ ಮಾಡಿದ್ದು, ೩೦ ಕೆ.ಜಿ. ಬೀಜವನ್ನು ಮೂರುವರೆ ಎಕರೆ ಗದ್ದೆಗೆ ನಾಟಿ ಮಾಡಿದ್ದಾರೆ.
ಬೈ ಹುಲ್ಲಿಗೆ ಬೆಲೆಯಿಲ್ಲ:
ಅಕಾಲಿಕ ಮಳೆ, ಪ್ರಾಣಿ ಪಕ್ಷಿಗಳ ಕಾಟದಿಂದ ಉತ್ತಮ ಫಸಲು ಪಡೆಯಲಾಗದಿದ್ದರೂ ಕೂಡ ಕೃಷಿಗೆ ಮಾಡಿದ ಖರ್ಚಿಗಾಗಿ ಬೈ ಹಲ್ಲು ಸಿಕ್ಕಿದರೆ ಸಾಕು ಎನ್ನುವ ಮನೋಭಾವ ಭತ್ತ ಬೆಳೆಯುವ ರೈತರಲ್ಲಿತ್ತು. ಜಾನುವಾರು ಸಾಕಾಣೆದಾರರು ಬೈ ಹುಲ್ಲು ಖರೀದಿಸುತ್ತಿದ್ದುದರಿಂದ ಸ್ವಲ್ಪವಾದರೂ ಬೆಲೆಯಿತ್ತು. ಆದರೆ ಈಗ ಸೈಲೇಜ್, ಜೋಳದ ದಂಟುಗಳನ್ನು ದನ, ಜಾನುವಾರು ಸಾಕಣೆದಾರರು ಖರೀದಿಸುವುದರಿಂದ ಬೈಹುಲ್ಲಿಗೆ ಬೆಲೆ ಇಲ್ಲದಂತಾಗಿರುವುದು ಕೃಷಿಕರನ್ನು ಆತಂಕಕ್ಕೆ ತಳ್ಳಿದೆ ಎನ್ನುತ್ತಾರೆ ಪ್ರತಿಭಾ ಹೆಗ್ಡೆ. ಭತ್ತದ ಬೀಜಕ್ಕೂ ಸರಕಾರ ಸಬ್ಸಿಡಿ ನೀಡುತ್ತಿಲ್ಲ, ಭತ್ತ ಬೆಳೆಗಾರರಿಗೆ ಪ್ರೋತ್ಸಾಹವೂ ಇಲ್ಲ ಎನ್ನುತ್ತಾರೆ ಅವರು.
………………………..
ರಾಜ್ಯ ಸರಕಾರ ಕಂಬಳಗಳಿಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಕಂಬಳವನ್ನು ಪೋಷಿಸುತ್ತಿದೆ. ಅದೇ ರೀತಿ ಕಂಬಳ, ಗದ್ದೆಯಲ್ಲಿ ಕೃಷಿ ಮಾಡುವ ರೈತರಿಗೂ ಪ್ರೋತ್ಸಾಹ ಬೆಂಬಲ ನೀಡಬೇಕು. ಯಾವ ಊರಿನ ಕಂಬಳಕ್ಕೆ ಸರಕಾರ ಸಹಾಯಧನ ನೀಡುತ್ತದೆಯೋ ಆ ಊರಿನಲ್ಲಿರುವ ಹಡಿಲು ಗದ್ದೆಯಲ್ಲಿ ಆ ಕಂಬಳ ಸಮಿತಿಯ ನೇತೃತ್ವದಲ್ಲಿ ಭತ್ತದ ಬೇಸಾಯ ಮಾಡುಬೇಕೆನ್ನುವ ಶರ್ತವನ್ನು ಸರಕಾರ ವಿಧಿಸಿ ಹಣಕಾಸಿನ ನೆರವು ನೀಡಬೇಕು. ಆಗ ಕಂಬಳದ ಜೊತೆಗೆ ಕಂಬಳ ಗದ್ದೆಗಳು, ಭತ್ತದ ಸಾಗುವಳಿಯೂ ಉಳಿಯಲಿದೆ – ಮನೋಹರ ಶೆಟ್ಟಿ, ನಡಿಕಂಬಳಗುತ್ತು, ರಾಜ್ಯ ಕಾರ್ಯದರ್ಶಿ ರೈತಸಂಘ, ಹಸಿರು ಸೇನೆ
…………………………………..
ಭತ್ತದ ಬೇಸಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಷ್ಟವಾದರೂ ಕಳೆದ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇನೆ. ಭತ್ತಕ್ಕೆ ಬೆಲೆ ಇಲ್ಲ, ಬೈ ಹುಲ್ಲಿಗೂ ಬೆಲೆ ಸಿಗುತ್ತಿಲ್ಲ. ಹೀಗೆ ಮುಂದುವರಿದರೆ ಮುಂದಿನ 10 ವರ್ಷದೊಳಗೆ ತುಳುನಾಡಿನಲ್ಲಿ ಭತ್ತದ ಬೇಸಾಯ ಅವನತಿಯಾಗಲಿದೆ. ಸರಕಾರದ ಪ್ರೋತ್ಸಾಹ, ಬೆಂಬಲ ಬೆಲೆ ಸಿಕ್ಕಿದರೆ ಕೃಷಿಕರಲ್ಲೂ ಬೇಸಾಯ ಮಾಡಲು ಆಸಕ್ತಿ ಮೂಡುತ್ತದೆ- ಪ್ರತಿಭಾ ಹೆಗ್ಡೆ ನೋಣಾಲು
