
ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ಒಟ್ಟು 445.45 ಕೋಟಿ ವ್ಯವಹಾರ ನಡೆಸಿ, 1.68 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು.

ಸಿದ್ದಕಟ್ಟೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ 1947 ರಲ್ಲಿ ಬಿ. ಕೃಷ್ಣ ರೈ ರವರ ಅಧ್ಯಕ್ಷತೆಯಲ್ಲಿ ಸಂಘವನ್ನು ಸ್ಥಾಪಿಸಲಾಗಿದ್ದು , ಬಂಟ್ವಾಳ ತಾಲೂಕಿನ 7 ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಸೇರಿದಂತೆ ಒಟ್ಟು 8ಗ್ರಾಮಗಳ ವ್ಯಾಪ್ತಿಯನ್ನು ಸಂಘ ಒಳಗೊಂಡಿದೆ.

2023-24ನೇ ಸಾಲಿನ ವರ್ಷಾಂತ್ಯಕ್ಕೆ 54.39 ಕೋಟಿ ಠೇವಣಿ ಹೊಂದಿದ್ದು , ವರದಿ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು 55 ಕೋಟಿ ಸಾಲ ವಿತರಿಸಲಾಗಿದೆ, ಹೊರ ಬಾಕಿ ಸಾಲವು 98.24 ಕೋಟಿ ಆಗಿದ್ದು, ವಿತರಿಸಿದ ಸಾಲದಲ್ಲಿ ಶೇ 98ರಷ್ಟು ವಸೂಲಾತಿಯಾಗಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಅಡಿಟ್ ವರದಿಯಲ್ಲಿ ಎ ಗ್ರೇಡ್ ನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ ಎಂದರು.

2023-24 ನೇ ಸಾಲಿನಲ್ಲಿ 1771 ರೈತರು 2037 ಎಕ್ರೆ ಜಮೀನಿಗೆ ಸಂಬಂಧಿಸಿದಂತೆ 52.74 ಲಕ್ಷ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ. ಕಳೆದ ವರ್ಷ ಸಂಘದ ವ್ಯಾಪ್ತಿಯ ಸದಸ್ಯರು ಸುಮಾರು 8 ರಿಂದ 10 ಕೋಟಿ ಬೆಳೆವಿಮೆ ಪರಿಹಾರ ಪಡೆದಿರುತ್ತಾರೆ . ಇದರಿಂದ ಸಂಘವು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳ ಪೈಕಿ ಒಂದಾಗಿದೆ ಎಂದರು.
ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ, ಸಂಘದಿಂದ ಬೆಳೆ ಸಾಲ ಪಡೆದ ಸದಸ್ಯರು ಮರಣ ಹೊಂದಿದ್ದಲ್ಲಿ, ಅವರ ಕುಟುಂಬಕ್ಕೆ ಸಂಘದ ವತಿಯಿಂದ ನೆರವಾಗುವ ದೃಷ್ಠಿಯಲ್ಲಿ ರೈತನಿಧಿ ಯೋಜನೆಯ ಮೂಲಕ ಆರ್ಥಿಕವಾಗಿ ಸಹಕಾರ ನೀಡಲಾಗುತ್ತಿದೆ. ಸಂಘದ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಸಿದ್ದಕಟ್ಟೆ ಪೇಟೆಯ ಶ್ರೀ ರಾಮನಗರದಲ್ಲಿ ಪ್ರಯಾಣಿಕರಿಗೆ ಅನೂಕೂಲವಾಗುವಂತೆ ಸುಸಜ್ಜಿತವಾದ ಪ್ರಯಾಣಿಕರ ಬಸ್ಸು ತಂಗುದಾಣ , ಹಾಗೂ ರಿಕ್ಷಾ ಚಾಲಕ ಮಾಲಕರಿಗೆ ಸಹಕರಿಸುವ ನಿಟ್ಟಿನಲ್ಲಿ ಆಟೋ ರಿಕ್ಷಾ ನಿಲ್ದಾಣವನ್ನು ಸಂಘದ ವತಿಯಿಂದ ನಿರ್ಮಿಸಿ ಕೊಡಲಾಗಿದೆ.
ನ್ಯಾಯಬೆಲೆ ಅಂಗಡಿಯ ಮೂಲಕ ಸಂಘದಲ್ಲಿ ಪಡಿತರ ಸಾಮಾಗ್ರಿಗಳನ್ನು ಸಮರ್ಪಕವಾಗಿ ವಿತರಿಸಲಾಗಿದ್ದು, ಸಂಘದಲ್ಲಿ ನೇತಾಜಿ ಬಹುಪಯೋಗಿ ಸೇವಾ ಕೇಂದ್ರದ ಹೆಸರಿನಲ್ಲಿ ಗೋದಾಮು ಕಟ್ಟಡ ಇದ್ದು,ಇದರ ಮೂಲಕ ರಾಸಾಯನಿಕ ಗೊಬ್ಬರ ,ಸಾವಯವ ಗೊಬ್ಬರ, ಮೈಲುತ್ತುತ್ತು , ಸುಣ್ಣ, ಸೇರಿದಂತೆ ರೈತರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಕೃಷಿ ಉಪಯುಕ್ತ ಉಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ . ಗ್ರಾಹಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಆರ್ಟಿಜಿಎಸ್, ಹಾಗೂ ನೆಫ್ಟ್ ವ್ಯವಸ್ಥೆಯೊಂದಿಗೆ ಕ್ಯೂ ಆರ್ ಕೋಡ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

2023-24 ನೇ ಸಾಲಿನ ಮಹಾಸಭೆಯು ಸೆ. 21ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಸಂಘದ ಕೇಂದ್ರ ಕಛೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ನಿರ್ದೇಶಕರಾದ ಸಂದೇಶ್ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಉಮೇಶ್ ಗೌಡ, ದೇವರಾಜ್ ಸಾಲ್ಯಾನ್, ಹರೀಶ್ ಆಚಾರ್ಯ , ಮಂದಾರತಿ ಎಸ್ ಶೆಟ್ಟಿ, ವೃತಿಪರ ನಿರ್ದೇಶಕ ಮಾಧವ ಶೆಟ್ಟಿಗಾರ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು
Advertisement







