ಬಂಟ್ವಾಳ: ದ.ಕ. ಜಿಲ್ಲಾ ಪಂಚಾಯತಿ, ಬಂಟ್ವಾಳ ತಾಲೂಕು ಕೃಷಿ ಇಲಾಖೆ ಇದರ ಆಶ್ರಯದಲ್ಲಿ ಆರ್ಐಡಿಎಫ್ ಯೋಜನೆಯಡಿ , ಕೆಆರ್ಡಿಐಎಲ್ ಸಂಸ್ಥೆಯ ವತಿಯಿಂದ ೨೫ ಲಕ್ಷ ರೂಪಾಯಿ ವೆಚ್ಚದ ಸುಸಜ್ಜಿತ ಬಂಟ್ವಾಳ ಹೋಬಳಿ ರೈತ ಸಂಪರ್ಕ ಕೇಂದ್ರ ಕಟ್ಟಡಕ್ಕೆ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಹಾಲು ಉತ್ಪಾದಕರ ಸಂಘದ ಬಳಿ ಇರುವ ಕೃಷಿ ಇಲಾಖೆಯ ಸ್ಥಳದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಕ್ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಅರ್ಹ ಫಲಾನುಭವಿ ಕೃಷಿಕರಿಗೆ ಶಾಸಕ ರಾಜೇಶ್ ನಾಕ್ ಕೃಷಿ ಯಂತ್ರೋಪಕರಣ, ತುಂತುರು ನೀರಾವರಿ ಘಟಕ, ಮಣ್ಣು ಆರೋಗ್ಯ ಕಾರ್ಡ್, ಎಸ್ಎನ್ಎಸ್ ಯೋಜನೆಯಡಿ ಉಚಿತ ಕಿಟ್ಗಳನ್ನು ವಿತರಿಸಿದರು.
ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುರೇಶ್ ಕುಲಾಲ್, ಕುಕ್ಕಿಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಉಪಾಧ್ಯಕ್ಷೆ ಬೇಬಿ, ಸಂಗಬೆಟ್ಟು ಗ್ರಾ.ಪಂ. ಸದಸ್ಯ ಸತೀಶ್ ಪೂಜಾರಿ, ಸಂಗಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ವ್ಯವಸಾಯಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ದ.ಕ. ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಪೊನ್ನಪ್ಪ ಗೋವಿಂದೇ ಗೌಡ, ಮಂಗಳೂರು ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಕುಮುದಾ ಸಿ. ಎನ್. ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್., ಬಂಟ್ವಾಳ ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಂದನ್ ಶೆಣೈ, ಕೆಆರ್ಡಿಐಎಲ್ ಸಂಸ್ಥೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಫರೀದಾ ನಾಡವ್, ಆತ್ಮ ಯೋಜನೆಯ ದೀಕ್ಷಾ, ಬಂಟ್ವಾಳ ಹೋಬಳಿ ದಾಸ್ತನು ನಿರ್ವಹಣೆಗಾರ್ತಿ ದೀಪ್ತಿ, ಜಲನಯನ ಸಹಾಯಕ ವಿನೀತ್, ಕಚೇರಿ ಸಹಾಯಕ ಸಂದೀಪ್ ಉಪಸ್ಥಿತರಿದ್ದರು.
ಬಂಟ್ವಾಳ ಹೋಬಳಿಯ ೧೬ ಗ್ರಾಮ ಪಂಚಾಯತಿಗಳನ್ನು ಒಳಗೊಂಡಂತೆ ೩೧ ಗ್ರಾಮಗಳಿಗೆ ಸಂಬಂಧಪಟ್ಟು ಕೃಷಿ ಇಲಾಖೆಯ ಸ್ವಂತ ಜಮೀನಿನಲ್ಲಿ ಸಂಗಬೆಟ್ಟು ಗ್ರಾಮದ ಸರ್ವೆ ಸಂಖ್ಯೆ ೧೭೯ರ ೭ ಸೆಂಟ್ಸ್ ಜಾಗದಲ್ಲಿ ಸುಸಜ್ಜಿತ ರೈತಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣಗೊಳ್ಳಲಿದೆ. ಮುಂದಿನ ಆರು ತಿಂಗಳಿನಿಂದ ಒಂದು ವರ್ಷದೊಳಗಾಗಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಾಗಿದ್ದು ಇಲಾಖೆಗೆ ಹಸ್ತಾಂತರ ಗೊಂಡ ಬಳಿಕ ಬಂಟ್ವಾಳ ಹೋಬಳಿಯ ರೈತರಿಗೆ ರೈತಸಂಪರ್ಕ ಕೇಂದ್ರದಲ್ಲಿ ಇಲಾಖೆಯಿಂದ ದೊರೆಯುವ ಮಾಹಿತಿ, ತರಬೇತಿ, ಮತ್ತಿತರ ಪ್ರಯೋಜನಗಳು ಲಭ್ಯವಾಗಲಿದೆ.