ಬಂಟ್ವಾಳ: ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಅರ್ಪಿಸುವ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ನೃತ್ಯಧಾರ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭ ಜ.7ರಂದು ಭಾನುವಾರ ಸಂಜೆ 4 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ.
ಸಂಜೆ 6.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ವಿದ್ವಾನ್ ಕೆ. ಚಂದ್ರಶೇಖರ ನಾವಡ ವಹಿಸುವರು. ಮುಖ್ಯ ಅತಿಥಿಗಳಾಗಿ ತುಳುವೆರೆ ಜನಪದ ಕೂಟ ಕೊಡಗು ಇದರ ಜಿಲ್ಲಾ ಖಜಾಂಚಿ ಪ್ರಭು ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಭಾಗವಹಿಸುವರು. ಖ್ಯಾತ ಚರ್ಮವಾದ್ಯ ತಯಾರಕ ಮತ್ತು ಕೊಳಲು ವಾದಕರಾಗಿರುವ ಪಿ. ರಾಜರತ್ನಂ ದೇವಾಡಿಗ ಅವರಿಗೆ ಕಲಾನಯನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಹಾಗೂ ಖ್ಯಾತ ವಸ್ತ್ರ ವಿನ್ಯಾಸಕಾರ ಮತ್ತು ಮುಖವರ್ಣಿಕೆ ಕಲಾವಿದ ಸುನೀಲ್ ಉಚ್ಚಿಲ ಅವರನ್ನು ಸನ್ಮಾನಿಸುವುದಾಗಿ ಸಂಚಾಲಕ ಉದಯ್ ವೆಂಕಟೇಶ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಜೆ 4.15ರಿಂದ ನೃತ್ಯಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯಧಾರ ನಡೆಯಲಿದೆ.