ಬಂಟ್ವಾಳ : ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲೊಂದಾದ ಬಂಟ್ಚಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ.ವು (ಪಿಎಲ್ ಡಿ ಬ್ಯಾಂಕ್)ಪ್ರಸಕ್ತ ಸಾಲಿನಲ್ಲಿ 1.05 ಕೋ.ರೂ. ಲಾಭಗಳಿಸಿದ್ದು, ಶೆ.11% ಡಿವಿಡೆಂಡ್ನ್ನು ಸದಸ್ಯರಿಗೆ ಹಂಚಲು ನಿರ್ಧರಿಸಲಾಗಿದೆ ಎಂದು ಬಿ.ಸಿ.ರೋಡಿನ ಯುವ ನ್ಯಾಯವಾದಿ, ಬ್ಯಾಂಕಿನ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,2020 ಫೆ.ತಿಂಗಳಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿದಾಗ ನಷ್ಟದಲ್ಲಿದ್ದ ಬ್ಯಾಂಕ್ ಪ್ರಸ್ತುತ ನಿರ್ದೇಶಕರು,ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಎಲ್ಲಾ ನಷ್ಟವನ್ನು ಭರಿಸಿ 2023-24ನೇ ಸಾಲಿನಲ್ಲಿ ಬ್ಯಾಂಕ್1.05 ಕೋ.ರೂ ಲಾಭವನ್ನು ಗಳಿಸಿದ್ದಲ್ಲದೆ ಇದೇ ಮೊದಲಿಗೆ ಸರ್ವಕಾಲಿಕ ದಾಖಲೆಯ ಪ್ರಮಾಣದಲ್ಲಿ ಸದಸ್ಯರಿಗೆ ಶೇ.11 ಡಿವಿಡೆಂಡ್ ಹಂಚಲು ಆಡಳಿತ ಮಂಡಳಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಸೆ.14 ರಂದು ನಡೆಯುವ ಬ್ಯಾಂಕಿನ ಮಹಾಸಭೆಯಂದು ಇದನ್ನು ಘೋಷಿಸಲಾಗುವುದು ಎಂದರು.
ತಾಲೂಕಿನ 84 ಗ್ರಾಮಗಳ ವ್ಯಾಪ್ತಿಯ ಕೃಷಿಕರ ಸೇವೆಯ ಧೈಯವನ್ನಿಟ್ಟು ಕೊಂಡು 1962ರಲ್ಲಿ ಸ್ಥಾಪನೆಗೊಂಡ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ತಾಲೂಕಿನ ರೈತರಿಗೆ ದೀರ್ಘಾವಧಿ ಹಾಗೂ ಮಧ್ಯಮಾವಧಿ ಸಾಲ ನೀಡುವ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಾಗಿದೆ. ಪ್ರಸ್ತುತ 11303 ಸದಸ್ಯರನ್ನು ಹೊಂದಿದ್ದು, ಒಟ್ಟು ಪಾಲು ಬಂಡವಾಳ 178.50 ಲಕ್ಷ ರೂ.,2024ರ ಮಾ. 31 ರ ಅಂತ್ಯಕ್ಕೆ 37.36 ಲಕ್ಷ ರೂ.ಕ್ಷೇಮ ನಿಧಿ, 146.66 ಲಕ್ಷ ರೂ.ಇತರ ನಿಧಿ ಹಾಗೂ 1974.96 ಲಕ್ಷ ರೂ. ಠೇವಣಿಯನ್ನು ಹೊಂದಿರುತ್ತದೆ ಎಂದು ಅವರು ವಿವರಿಸಿದರು.
2023-24 ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ 1162.52 ಲ.ರೂ. ಸಾಲ ವಿತರಿಸಿದರೆ, ನಬಾರ್ಡ್ ಯೋಜನೆಯಡಿ 436 ಸದಸ್ಯರಿಗೆ 301.68 ಲ.ರೂ. ಕೃಷಿ ಸಾಲ ಮತ್ತು ಸ್ವಂತ ಬಂಡವಾಳ ಯೋಜನೆಯಲ್ಲಿ 610 ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಯೋಜನೆಗಳಲ್ಲಿ 860.84 ಲ.ರೂ. ಸಾಲ ವಿತರಿಸಲಾಗಿದೆ ಎಂದು ಅಧ್ಯಕ್ಷ ಅರುಣ್ ರೋಶನ್ ಡಿಸೋಜ ವಿವರಿಸಿದರು.
ವಸೂಲಾತಿಯಲ್ಲಿಪ್ರಥಮ:
2023-24 ನೇ ಸಾಲಿನಲ್ಲಿ 506.66 ಲ.ರೂ. ವಸೂಲಿ ತಗಾದೆ ಹೊಂದಿದ್ದು ಆ ಪೈಕಿ 476.26 ಲ.ರೂ. ವಸೂಲಿ ಮಾಡುವ ಮೂಲಕ ಶೇ. 94% ವಸೂಲಾತಿ ಸಾಧನೆ ಮಾಡಿದೆ ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಭೂ ಬ್ಯಾಂಕ್ ಗಳ ಪೈಕಿ ಸಾಲ ವಸೂಲಾತಿಯಲ್ಲು ಬಂಟ್ವಾಳ ಭೂಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ ಎಂದರಲ್ಲದೆ ಕ.ರಾ.ಸ.ಕೃ ಮತ್ತು ಗ್ರಾ.ಅ ಬ್ಯಾಂಕಿನಿಂದ ಪಡೆದ ಸಾಲ 847.82 ಲ.ರೂ. ಹೊರಬಾಕಿ ಇದ್ದು,2024ರ ಮಾ.31ಕ್ಕೆ ಸಂದಾಯವಾಗಬೇಕಿದ್ದ ಕ.ರಾ.ಸ.ಕೃ ಮತ್ತು ಗ್ರಾ.ಅ ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರುಪಾವತಿಸಲಾಗಿದೆ ಎಂದರು.
ಪ್ರಶಸ್ತಿ :-
ಬ್ಯಾಂಕ್ ನಬಾರ್ಡ್ ಸಾಲ ವಸೂಲಾತಿಯಲ್ಲಿ 2021-22ರಲ್ಲಿ 75.17%, 2022-23ರಲ್ಲಿ 75.16%, 2023-24ರಲ್ಲಿ 94% ವಸೂಲಾತಿ ಸಾಧಿಸಿದ್ದು, ಜಿಲ್ಲಾ ಮಟ್ಟದಲ್ಲಿ 2022ರ ಸಾಲಿನಲ್ಲಿ ದ್ವಿತೀಯ , 2022-23 ಮತ್ತು 2024ರಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಕ. ರಾ.ಸ. ಕೃ.ಮತ್ತು ಗ್ರಾ. ಅ. ಬ್ಯಾಂಕಿನಿಂದ ನಿರಂತರ 3 ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ವಸೂಲಾತಿ ಸಾಧನೆಗಾಗಿ ಪ್ರಶಸ್ತಿ ಪಡೆಯಲಾಗಿದೆ ಹಾಗೂ ರಾಜ್ಯದ 183 ಪಿಎಲ್ಡಿ ಬ್ಯಾಂಕುಗಳಲ್ಲಿ ಲಾಭಗಳಿಸಿದ ಕೆಲವೇ ಪಿಎಲ್ಡಿ ಬ್ಯಾಂಕ್ಗಳ ಪೈಕಿ ಬಂಟ್ವಾಳ ಭೂ ಬ್ಯಾಂಕ್ ಕೂಡ ಒಂದಾಗಿದೆ.ಈ ಸಾಧನೆಗೆ ಸಹಕರಿಸಿದ ಬ್ಯಾಂಕಿನ ಎಲ್ಲಾ ರೈತ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅವರು ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು.
ಮುಂದಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ ರೈತ ಸದಸ್ಯರಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು,ಎಲ್ಲಾ ಗ್ರಾಮಗಳ ರೈತರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ನೋಂದಾಯಿಸಿ, ಸರಕಾರ ಘೋಷಿಸಿರುವ 3% ಬಡ್ಡಿದರದ ಕೃಷಿ ಆಧಾರಿತ ಸಾಲ ಹಾಗೂ ಕೃಷಿಯೇತರ ಸಾಲ ಯೋಜನೆಗಳಲ್ಲಿ ಸಾಲ ನೀಡಲಾಗುವುದಲ್ಲದೆ ಚಿನ್ನಾಭರಣ ಈಡಿನ ಮೇಲೆ ಜೊತೆಗೆ ಇತರ ಎಲ್ಲಾ ಯೋಜನೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಮುಖಾಂತರ ಸದಸ್ಯರ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
15 ಕೋ.ರೂ.ಸಾಲ ಹಂಚಿಕೆಯ ಗುರಿ
ಕೃಷಿಕರ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಲಾಗುವುದು ಎಂದ ಅವರು 2024-25 ನೇ ಸಾಲಿನಲ್ಲಿ 15 ಕೋ.ರೂ.ಸಾಲ ಹಂಚಿಕೆಯ ಗುರಿ ಹೊಂದಿದ್ದು,ಇದನ್ನು ತಲುಪಲು ಪ್ರಯತ್ನಿಸ ಲಾಗುವುದು. ಬ್ಯಾಂಕಿನ ಮಾಣಿ ಶಾಖೆಯಲ್ಲಿ ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸಿ ಈ ಯೋಜನೆಯಲ್ಲಿ ಚಿನ್ನಾಭರಣ ಮೇಲಿನ ಸಾಲ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗುತ್ತಿದೆ ಎಂದು ಅಧ್ಯಕ್ಷ ಅರುಣ್ ಡಿಸೋಜ ವಿವರಿಸಿದರು.
ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸ್ವಂತ ಕಛೇರಿ ಕಟ್ಟಡ ಹೊಂದಿದ್ದು, ಪ್ರಸ್ತುತ ಈ ಕಟ್ಟಡದಲ್ಲಿ ವಿವಿಧ ಸಹಕಾರಿ ಸಂಸ್ಥೆ,ವಾಣಿಜ್ಯ ತೆರಿಗೆ ಸಂಸ್ಥೆ ಹಾಗೂ ಅಂಗಡಿಗಳು ಕಾರ್ಯನಿರ್ವಹಿಸುತ್ತದೆ ಎಂದರು.
ಸೆ.14ರಂದು ಮಹಾಸಭೆ:
ಬ್ಯಾಂಕಿನ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14 ರಂದುಬೆಳಿಗ್ಗೆ 11 ಗಂಟೆಗೆ ಬಿ.ಸಿ.ರೋಡಿನ ಗೀತಾಂಜಲಿಸಭಾಂಗಣದಲ್ಲಿ ನಡೆಯಲಿದ್ದು, ಸದಸ್ಯರೆಲ್ಲರೂ ಸಭೆಯಲ್ಲಿ ಭಾಗವಹಿಸುವಂತೆ ಅವರು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರಶೇಖರ ಬಂಗೇರ, ನಿರ್ದೇಶಕರುಗಳಾದ ಲಿಂಗಪ್ಪ ಪೂಜಾರಿ, ವಿಜಯಾನಂದ, ಸುಂದರ ಪೂಜಾರಿ, ಲೋಲಾಕ್ಷಿ, ಲತಾ ಹಾಗೂ ವ್ಯವಸ್ಥಾಪಕರಾದ ಪದ್ಮನಾಭ ಜಿ. ಉಪಸ್ಥಿತರಿದ್ದರು.