ಬಂಟ್ವಾಳ: ಕಳೆದ ಮೂರು ದಿನಗಳಿಂದ ಫರಂಗಿಪೇಟೆ ಬೀದಿಯಲ್ಲಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಫರಂಗಿಪೇಟೆಯ ಸೇವಾಂಜಲಿ ಸಂಸ್ಥೆ ಮಾನವೀಯತೆ ಮೆರೆದಿದೆ.
ಬುಧವಾರ ಬೆಳಿಗ್ಗೆ ಫರಂಗಿಪೇಟೆಯ ಶ್ರೀರಾಮ ವಿದ್ಯಾಕೇಂದ್ರದ ಆವರಣದ ಬಳಿ ಹಳೆ ಬಟ್ಟೆ ಧರಿಸಿಕೊಂಡು ಮರಳಿನಲ್ಲಿ ಹೊರಳಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಅವರು ವಿಚಾರಿಸಿದಾಗ ಆತ ಮಾನಸಿಕ ಸ್ಥಿಮಿತ ಕಳಕೊಂಡಿರುವುದು ತಿಳಿದು ಬಂದಿದೆ. ತನ್ನ ಹೆಸರನ್ನು ಉಮಾಮಹೇಶ್ವರ ಎಂದು ಹೇಳುವ ಆತ ಊರು ಯಾವುದು ಎಂದು ವಿಚಾರಿಸಿದಾಗ ಊರಿನ ಹೆಸರು ಹೇಳುವ ಬದಲು ಆ ಊರು ಸರಿ ಇಲ್ಲ, ಅಲ್ಲಿನ ಜನರು ಸರಿ ಇಲ್ಲ ಎಂದಷ್ಟೇ ಹೇಳುತ್ತಿದ್ದ. ತಕ್ಷಣ ಕೃಷ್ಣ ಕುಮಾರ್ ಪೂಂಜ ಅವರು ಆತನಿಗೆ ಊಟೋಪಚಾರ ನೀಡಿದರು. ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಮುಂದಿನ ಚಿಕಿತ್ಸೆಯ ಉದ್ದೇಶಕ್ಕಾಗಿ ಅಂಬ್ಯುಲೆನ್ಸ್ ಮೂಲಕ ಕರೆದೊಯ್ದು ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಯಿತು. ಬಟ್ಟೆಬರೆಗಳನ್ನು ಸೇವಾಂಜಲಿ ವತಿಯಿಂದ ನೀಡಲಾಯಿತು. ಮನಾಸಿಕ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ನಾರಾಯಣ ಬಡ್ಡೂರು, ಎಫ್. ಗಣೇಶ, ವಿಕ್ರಂ ಬರ್ಕೆ, ಹರಿಣಿ ಪಂಜಿಕಲ್ಲು, ಪದ್ಮನಾಭ ಕಿದೆಬೆಟ್ಟು, ಆನಂದ ಕುಚ್ಚೂರು ಹಾಗೂ ಸೇವಾಂಜಲಿ ಸಿಬ್ಬಂದಿಗಳು ಸಹಕರಿಸಿದರು.