ಬಂಟ್ವಾಳ: ತನ್ನ ಕೆಲಸದ ಸಹಾಯಕನೇ ಮನೆಯಲ್ಲಿ ಕಳ್ಳತನ ಮಾಡಿ ನಗ ನಗದು ದೋಚಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುದುವಿನಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಮೊಹಮ್ಮದ್ ಝಫರುಲ್ಲಾ (36) ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು ಅವರ ಕಟ್ಟಡ ಕಾಮಗಾರಿಯ ಸಹಾಯಕ ಅಲಿ ಎಂಬಾತನೇ ಮಾಲಕನಿಗೆ ವಿಶ್ವಾನದ್ರೋಹ ಎಸಗಿ ಕಳವು ನಡೆಸಿದ ಆರೋಪಿ.
ಮೊಹಮ್ಮದ್ ಝಫರುಲ್ಲಾ (36) ಅವರು ಬಿಲ್ಡರ್ ವ್ಯವಹಾರ ಮಾಡಿಕೊಂಡಿದ್ದು ಅವರ ಜೊತೆ ಸುಮಾರು 7-8 ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿ ಆಲಿ ಎಂಬಾತನು ಕೆಲಸ ಮಾಡಿಕೊಂಡಿದ್ದು ಮಾಲಕನ ಜೊತೆ ವಿಶ್ವಾಸದಿಂದ ಇದ್ದ. ಅ. 18 ರಂದು ಝಪರುಲ್ಲಾ ಅವರ ಮನೆಯಲ್ಲಿದ್ದ ಅವರ ತಂದೆ, ತಾಯಿ, ಅಕ್ಕ, ತಂಗಿ ಯವರು ಅವರ ತಮ್ಮನ ಮನೆಗೆ ಹೋಗಲು ತಮ್ಮ ಮನೆಗೆ ಬೀಗ ಹಾಕಿ ಮನೆಯ ಕೀಯನ್ನು ಆಲಿಗೆ ನೀಡಿದ್ದಾರೆ. ಅ. 23 ರಾತ್ರಿ ಝಪರುಲ್ಲಾ ಮನೆಯವರು ಮನೆಗೆ ಹಿಂತಿರುಗಿ, ಮನೆಯ ಕೀಯನ್ನು ಪಡೆಯಲು ಆಲಿಗೆ ಪೋನ್ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮನೆಮಂದಿ ಮನೆ ಹೊರಗಡೆಯಿಂದ ಕಿಟಕಿ ಮೂಲಕ ನೋಡಿದಾಗ ಬೆಡ್ ರೂಮಿನಲ್ಲಿರುವ
ಕಪಾಟಿನ ಲಾಕರ್ ನ್ನು ಮುರಿದು ಅದರಲ್ಲಿ ಇದ್ದ ಸ್ವತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದು ಕಂಡುಬಂದಿತ್ತು. ಬಳಿಕ ಪರಿಶೀಲಿಸಿದಾಗ ನಗದು ರೂಪಾಯಿ 27.50, ಲಕ್ಷ ರೂಪಾಯಿ ಹಾಗೂ ಅಂದಾಜು ರೂ. 4.96 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.