ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ , ಸರಪಾಡಿ ಘಟಕ ಸಮಿತಿಯ ವತಿಯಿಂದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಎ.18ರಂದು ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಕಲಾವಿದರ ಬೆಳವಣಿಗೆಗೆ ಸರಪಾಡಿಯ ಕೊಡುಗೆ ಮಹತ್ತರವಾಗಿದೆ. ಕಲಾಭಿಮಾನಿಗಳ ಪ್ರೀತಿ, ಪ್ರೋತ್ಸಾಹದಿಂದ ಯಕ್ಷಗಾನ ಬೆಳೆಯಲು ಸಾಧ್ಯವಾಗಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ, ಸತೀಶ್ ಶೆಟ್ಟಿ ಪಟ್ಲ ಅವರ ನೇತೃತ್ವದಲ್ಲಿ ಯಕ್ಷಗಾನ ಕಲಾವಿದರಿಗೆ ಭರವಸೆಯ ಬೆಳಕು ನೀಡಿ ಮುನ್ನಡೆಸುವ ಕಾರ್ಯ ಮಾಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನ ಸಾಧಕರಾದ ಸರಪಾಡಿ ಅಶೋಕ ಶೆಟ್ಟಿ, ದಿನೇಶ ಶೆಟ್ಟಿ ಕಾವಳಕಟ್ಟೆ ಮತ್ತು ಯಕ್ಷಾಭಿಮಾನಿ ಗೋಪಿ ಮುನ್ನಲಾಯಿಪದವು ಅವರನ್ನು ಸಮ್ಮಾನಿಸಲಾಯಿತು.
ಸರಪಾಡಿ ಘಟಕ ಅಧ್ಯಕ್ಷ ಶಶಿಕಾಂತ ಶೆಟ್ಟಿ ಆರುಮುಡಿ,ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನ ಆಡಳಿತ ಟ್ರಸ್ಟ್ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್ಗುತ್ತು, ಟ್ರಸ್ಟಿ ಶಿವಪ್ಪ ಪೂಜಾರಿ ಹಟದಡ್ಕ, ಭಾರತಿ ಅಮ್ಮ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಽಕಾರಿ ಸುಧಾಕರ ಶೆಟ್ಟಿ, ಉದ್ಯಮಿ ಗಣೇಶ್ ಆಚಾರ್ಯ ಹಾಗು ಘಟಕದ ಪದಾಽಕಾರಿಗಳು ಉಪಸ್ಥಿತರಿದ್ದರು.
ಘಟಕ ಕಾರ್ಯದರ್ಶಿ ಧನಂಜಯ ಶೆಟ್ಟಿ ಎನ್. ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಡಾ.ಬಾಲಚಂದ್ರ ಶೆಟ್ಟಿ ವಂದಿಸಿದರು. ಬಳಿಕ ಶ್ರೀ ಕ್ಷೇತ್ರ ಪಾವಂಜೆ ಮೇಳದವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.