
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರುವಿನಲ್ಲಿರುವ ಶ್ರೀರಾಮ ವೈದ್ಯನಾಥ ಭಜನಾ ಮಂದಿರದ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥ ಶತರುದ್ರಯಾಗ 2025 ಜ.5 ರಿಂದ 14ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಾನುವಾರ ಸುಜೀರುವಿನ ಶ್ರೀ ರಾಮ ವೈದ್ಯನಾಥ ಭಜನಾ ಮಂದಿರದಲ್ಲಿ ನಡೆಯಿತು.

ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಗೌರವ ಸಲಹೆಗಾರ ರಾಧಸುರಭಿ ಗೋ ಮಂದಿರದ ಭಕ್ತಿ ಭೂಷಣ್ ಪ್ರಭುಜಿ ಮಾತನಾಡಿ ಶತರುದ್ರ ಯಾಗ ಅತ್ಯಂತ ಶಕ್ತಿಶಾಲಿಯಾದುದು, ಯಾಗ ಮಾಡಲು ನಮ್ಮಲ್ಲಿ ಆಧ್ಯಾತ್ಮ ಶಕ್ತಿ, ಭಕ್ತಿ ಶ್ರದ್ಧೆಯೂ ಬೇಕು. ಯಾಗದ ಸಂದರ್ಭ ಶುದ್ಧಾಚಾರದಲ್ಲಿ ಇದ್ದುಕೊಂಡು ದೇವರ ನಾಮಸ್ಮರಣೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಸುಜೀರು ಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ದುಷ್ಟ ಶಕ್ತಿಗಳನ್ನು ನಿವಾರಿಸಿ ನಮ್ಮ ಜೀವನದ ಅಭ್ಯುದಯಕ್ಕೆ ರುದ್ರಯಾಗ ಪ್ರಯೋಜನಕಾರಿಯಾಗಲಿದೆ. ಈ ಪುಣ್ಯ ಕಾರ್ಯದಲ್ಲಿ ಶ್ರದ್ದಾಭಕ್ತಿ, ಇಚ್ಚಾಶಕ್ತಿಯಿಂದ ತೊಡಗಿಸಿಕೊಂಡಾಗ ಜೀವನ ಸಾರ್ಥಕತೆ ಪಡೆಯಲಿದೆ ಎಂದ ಅವರು ಮನಸ್ಸಿನೊಳಗಿನ ದುಷ್ಟ ಶಕ್ತಿಯೂ ಈ ಯಾಗದ ಮೂಲಕ ನಾಶವಾಗಲಿ ಎಂದರು.
ಪುರೋಹಿತರಾದ ಅಮ್ಟಾಡಿ ಏರ್ಯ ರಘುರಾಮ ಮಯ್ಯ, ಉಪಾಧ್ಯಕ್ಷ ಅನಿಲ್ ಪಂಡಿತ್, ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ತೇವು ಪೂರಕ ಮಾಹಿತಿ ನೀಡಿದರು.
ಭಜನಾ ಮಂದಿರ ಸಮಿತಿ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಗೌರವಾಧ್ಯಕ್ಷ ರವೀಂದ್ರ ಕಂಬಳಿ ಸುಜೀರು ಬೀಡು, ಮೋನಪ್ಪ ಯಾನೆ ಮುಂಡಪ್ಪ ಪೂಜಾರಿ, ರಾಮಕೃಷ್ಣ ಶೆಟ್ಟಿ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶಟ್ಟಿ ಸುಜೀರ್ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ಪ್ರಮೋದ್ ಕುಮಾರ್ ಸುಜೀರು ವಂದಿಸಿದರು.
—
