ಬಂಟ್ವಾಳ: ನದಿ ತೀರದಲ್ಲಿರುವ ರೈತರಿಗೆ ಪೂರ್ವ ಮಾಹಿತಿ ನೀಡದೆ ಪಂಪ್ಸೆಟ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ರೈತ ವಿರೋಧಿ ಆದೇಶವನ್ನು ಹಿಂಪಡೆಯುವಂತೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ರೈತರ ನಿಯೋಗ ಬಂಟ್ವಾಳ ತಹಶೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಿತು.
ಮಂಗಳೂರಿನ ಜನರಿಗೆ ಕುಡಿಯುವ ನೀರಿನ ಕೊರತೆ ನೆಪದಲ್ಲಿ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಕಂಬದಿಂದಲೇ ಸಂಪರ್ಕ ಕಡಿತಗೊಳಿಸಿ ರೈತರನ್ನು ಸರ್ವನಾಶ ಮಾಡುವ ಆದೇಶವನ್ನು ಜಿಲ್ಲಾಡಳಿತ ನೀಡಿದೆ. ಜಿಲ್ಲಾಡಳಿತದ ಈ ಕಠೋರ ಕ್ರಮದಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದು ತಕ್ಷಣವೇ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅಥವಾ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಮರಳಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭ ಬಂಟ್ವಾಳ ತಾಲೂಕು ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಪಾಣೆ ಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ರೈತ ಮುಖಂಡರಾದ ಇದ್ದಿನಬ್ಬ ಎನ್. ಶಾಂತಕುಮಾರ ಮಯ್ಯ, ಸಂದೇಶ ಗಟ್ಟಿ, ಅಬ್ದುಲ್ ಜಬ್ಬಾರ್, ಸುರೇಶ್ ಗಟ್ಟಿ, ಅಬ್ದುಲ್ ಖಾದರ್ ಮೊದಲಾದವರು ನಿಯೋಗದಲ್ಲಿದ್ದರು. ಬಳಿಕ ಮೆಸ್ಕಾಂ ಎಇಇ ನಾರಾಯಣ ಜಿ. ಇವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಲಾಯಿತು.