ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿ ಇಳಿಜಾರು ಪ್ರದೇಶದ ಕಸದ ರಾಶಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿ ಮೂರು ದಿನವಾದರೂ ಇನ್ನೂ ಆ ಸ್ಥಳದಲ್ಲಿ ಹೊಗೆಯಾಡುತ್ತಿದೆ. ಗುರುವಾರ ಬೆಂಕಿ ಕಾಣಿಸಿಕೊಂಡ ಬಳಿಕ ಸುಮಾರು ೩ ಗಂಟೆಗಳ ಕಾಲ ಅಗ್ನಿಶಾಮಕ ದಳ ನೀರು ಸಿಂಪಡಿಸಿ ಬೆಂಕಿ ನಂದಿಸಿದರೂ ಶನಿವಾರ ಸಂಜೆಯ ವೇಳೆಗೂ ಹೊಗೆ ಮೇಲೆಳುತ್ತಿತ್ತು.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ, ರೈಲ್ವೇ ನಿಲ್ದಾಣದ ಬಳಿ ಗುರುವಾರ ಮಧ್ಯಾಹ್ನದ ವೇಳೆಗೆ ಇಳಿಜಾರು ಗುಂಡಿಯ ಕಸದ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ಸ್ಥಿತಿ ನಿರ್ಮಾಣಗೊಂಡಿತ್ತು. ಬೆಂಕಿಯಿಂದ ಹೊರ ಚಿಮ್ಮಿದ ದಟ್ಟ ಹೊಗೆ ನಗರವಿಡಿ ವ್ಯಾಪಿಸಿ ಕೊಂಡಿತ್ತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ನಿರಂತರ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದೆ. ಆದರೆ ಘಟನೆ ನಡೆದು ಮೂರು ದಿನವಾದರೂ ಅದೇ ಸ್ಥಳದಿಂದ ಮತ್ತೆ ಹೊಗೆಯಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮರಗಳ ಮಾರಣ ಹೋಮ:
ಈ ಹಿಂದೆ ಈ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡು ಸ್ಥಳದಲ್ಲಿದ್ದ ಅನೇಕ ಮರಗಳು ಆಹುತ್ತಿಯಾಗಿತ್ತು. ಈ ಭಾರಿಯೂ ಹಲವು ಮರಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಯಾರದ್ದೋ ಬೇಜಬ್ದಾರಿಗೆ ಬೆಳೆದು ನಿಂತ ಮರಗಳ ಮಾರಣ ಹೋಮವಾಗುತ್ತಿದೆ.