ಬಂಟ್ವಾಳ: ಶನಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಬಿ.ಸಿ.ರೋಡ್ ಸಮೀಪದ ಮಿತ್ತಬೈಲು ನಿವಾಸಿ, ಶಾಲಾ ಬಾಲಕನೋರ್ವನ ಮೃತದೇಹ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಪತ್ತೆಯಾದ ಘಟನೆ ಶನಿವಾರ ತಡ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ.ಸಿ.ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಅಝೀಂ (13) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಶನಿವಾರ ಮಧ್ಯಾಹ್ನದ ವೇಳೆಗೆ ಪಾಣೆಮಂಗಳೂರು ಅಜ್ಜಿ ಮನೆಗೆ ಬಂದಿದ್ದ ಬಾಲಕ ಅಲ್ಲಿ ತನ್ನ ಸ್ನೇಹಿತರೊಂದಿಗೆ ಇದ್ದುದನ್ನು ಆ ಪರಿಸರದ ಮಂದಿ ಗಮನಿಸಿದ್ದರು, ಆದರೆ ಮಧ್ಯಾಹ್ನದ ಬಳಿಕ ಬಾಲಕ ಹಠಾತ್ ಕಾಣೆಯಾಗಿದ್ದ.
ಬಾಲಕನನ್ನು ಸಂಪರ್ಕಿಸಲು ಮನೆಮಂದಿ ಸಾಕಷ್ಟು ಪ್ರಯತ್ನಿಸಿದ್ದರೂ ಸಫಲರಾಗಿರಲಿಲ್ಲ ಎನ್ನಲಾಗಿದೆ. ಬಾಲಕನ ಕೈಯಲ್ಲಿದ್ದ ಮೊಬೈಲ್ ರಿಂಗಿಣಿಸುತ್ತಿದ್ದರೂ ಕರೆ ಸ್ವೀಕಾರ ಆಗದ ಹಿನ್ನಲೆಯಲ್ಲಿ ಆತಂಕಗೊಂಡ ಮನೆ ಮಂದಿ ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು.
ಪೊಲೀಸರು ಬಾಲಕನ ಕೈಯಲ್ಲಿದ್ದ ಮೊಬೈಲ್ ಟ್ರೇಸ್ ಮಾಡಿದಾಗ ದೊರೆತ ಮಾಹಿತಿಯಂತೆ ಕಳ್ಳಿಗೆ ಗ್ರಾಮದ ಕೆರೆಯ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಮೇಲ್ಭಾಗದಲ್ಲಿ ಬಾಲಕ ಧರಿಸಿದ್ದ ವಸ್ತ್ರ, ಪಾದರಕ್ಷೆ ಹಾಗೂ ಮೊಬೈಲ್ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ತಡರಾತ್ರಿ ವೇಳೆ ಪತ್ತೆಯಾಗಿದೆ.
ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.