ಬಂಟ್ವಾಳ: ಮತದಾರರು ನೀಡಿದ ಸಹಕಾರದಿಂದಾಗಿ ಬಂಟ್ವಾಳ ಕ್ಷೇತ್ರದಲ್ಲಿ ಅಭೂತಪೂರ್ವವಾದ ಅಭಿವೃದ್ಧಿ ಹಾಗೂ ನವಬಂಟ್ವಾಳವಾಗಿ ಮಾರ್ಪಾಡು ಮಾಡಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಇರ್ವತ್ತೂರು ಶಕ್ತಿ ಕೇಂದ್ರದ ಶುಭಕರ ಶೆಟ್ಟಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯ ಜೊತೆಗೆ ಕಾರ್ಯಕರ್ತರ ,ಮತದಾರರ ಬೇಡಿಕೆಯನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತೇನೆ, ನಿರಂತರವಾಗಿ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೇಕಾಗುವ ಮಾನಸಿಕ ಶಕ್ತಿಯನ್ನು ಕಾರ್ಯಕರ್ತರು ಪ್ರದರ್ಶನ ಮಾಡಬೇಕು ಎಂದು ತಿಳಿಸಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ಶಾಸಕನಾಗಿ ಯಾವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ರಾಜ್ಯದಲ್ಲಿ ರಾಜೇಶ್ ನಾಯ್ಕ್ ಅವರು ಮಾದರಿಯಾಗಿದ್ದಾರೆ.
ಮುಂದಿನ 30 ದಿನಗಳು ಚುನಾವಣಾ ಕಾರ್ಯಕ್ಕೆ ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು, ಕಾರ್ಯಕರ್ತರು ಅವಿರತವಾಗಿ ಪಕ್ಷದ ಏಳಿಗಾಗಿ ದುಡಿಯಬೇಕಾಗಿದೆ ಎಂದರು. ಬಿಜೆಪಿ ಪ್ರಚಾರಕ್ ನವೀನ್ ಅಯೋಧ್ಯೆ ಅವರು ಮಾತನಾಡಿ, ಕಳೆದ 70 ವರ್ಷಗಳಿಂದ ಯಾವುದೇ ಗ್ಯಾರಂಟಿ, ವಾರೆಂಟಿ ಇಲ್ಲದೆ ಆಡಳಿತ ಮಾಡಿದ ಕಾಂಗ್ರೆಸ್ ನ ಅಭಿವೃದ್ಧಿ ಹಾಗೂ ಕೇವಲ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತುಲನೆ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.
ಬಿಜೆಪಿ ನೀಡಿದ ಪ್ರತಿಯೊಂದು ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕಾರ್ಯ ಮಾಡಿದೆ.
ಪ್ರಾಮಾಣಿಕ ಸಚ್ಚಾರಿತ್ರ್ಯದ ವ್ಯಕ್ತಿ ಯಾಗಿರುವ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಮಾತನಾಡಿ ಬಿಜೆಪಿ ರಾಷ್ಟ್ರ ಹಿತದ ಕೆಲಸ ಮಾಡುವ ದೊಡ್ಡ ಪಕ್ಷವಾಗಿದ್ದು, ನಿರಂತರವಾಗಿ ನಿಷ್ಠೆಯಿಂದ ಪಕ್ಷವನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡಿದ ಫಲವಾಗಿ ಇಂದು ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ಮಾಡುವ ಸೌಭಾಗ್ಯ ಸಿಕ್ಕಿದೆ ಎಂದರು.
ಕ್ಷೇತ್ರದ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು, ಶಕ್ತಿ ಕೇಂದ್ರದ ಅಧ್ಯಕ್ಷ ಶುಭಕರ ಶೆಟ್ಟಿ, ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ನಾವೂರ ಮಹಾಶಕ್ತಿ ಕೇಂದ್ರದ ಪ್ರಮುಖ್ ಹರೀಶ್ ಪ್ರಭು, ಬೂತ್ ಅಧ್ಯಕ್ಷರುಗಳಾದ ರವಿಶಂಕರ್ ಹೊಳ್ಳ, ಸುಂದರ ನಾಯ್ಕ್ , ಗ್ರಾ.ಪಂ. ಅಧ್ಯಕ್ಷ ಎಂ.ಪಿ.ಶೇಖರ್ ಪೂಜಾರಿ,ಉಪಾಧ್ಯಕ್ಷೆ ಹರಿಣಾಕ್ಷಿ.ಗ್ರಾ.ಪಂ.ಸದಸ್ಯರು ಗಳಾದ ಕಲ್ಯಾಣಿ, ಮಲಾತಿ , ಮತ್ತಿತರರು ಉಪಸ್ಥಿತರಿದ್ದರು.