ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ,ಬಂಟ್ವಾಳ ಇದರ 15 ನೇ
ಉಪ್ಪಿನಂಗಡಿ ಶಾಖೆಯು ಬ್ಯಾಂಕ್ ರಸ್ತೆಯಲ್ಲಿರುವ ಕೋಟೆ ಕೆಂಪಿನಮಜಲು “ಗೌರಿಕಾಂಪ್ಲೆಕ್ಸ್” ನ ಒಂದನೇ ಮಹಡಿಯಲ್ಲಿ ಜನವರಿ14 ರಂದು ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ತಿಳಿಸಿದ್ದಾರೆ.


ಸೋಮವಾರ ಬಂಟ್ವಾಳ ಬೈಪಾಸ್ ನಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲನಗೈದು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ನೂತನ ಶಾಖೆಯನ್ನು ಉದ್ಘಾಟಿಸುವರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಭದ್ರತಾಕೊಠಡಿ,ಮಾಜಿ ಸಚಿವ ರಮಾನಾಥ ರೈ ಅವರು ಕಂಪ್ಯೂಟರ್,ಮೈಸೂರು ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಡಾ.ಜಿ.ಉಮೇಶ್ ಸೇಪ್ ಲಾಕರನ್ನು ಉದ್ಘಾಟಿಸುವರು, ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್.ರಮೇಶ್ ಠೇವಣಿಪತ್ರ ಬಿಡುಗಡೆಗೊಳಿಸಲಿದ್ದಾರೆ. ಸ್ಥಳೀಯ ಗಣ್ಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸ್ವಾತಂತ್ರ್ಯ ಯೋಧ ದಿ.ಡಾ.ಅಮ್ಮೆಂಬಳ ಬಾಳಪ್ಪ ಹಾಗೂ ಸಹಕಾರಿ ಧುರೀಣ ಹೂವಯ್ಯ ಮೂಲ್ಯ ಅವರ ಸಾರಥ್ಯದಲ್ಲಿ 131 ಸದಸ್ಯರು 22,620 ಸಾ.ರೂ. ಪಾಲು ಬಂಡವಾಳದೊಂದಿಗೆ ಕಾರ್ಯಾರಂಭವಾದ ಸಮಾಜ ಸೇ.ಸ.ಸಂಘ ಉತ್ತಮ ಬ್ಯಾಂಕಿಂಗ್ ಸೇವೆ ನೀಡುತ್ತಾ ಪ್ರಸ್ತುತ 14 ಶಾಖೆಯನ್ನು ಹೊಂದಿ ಇದೀಗ ಉಪ್ಪಿನಂಗಡಿಯಲ್ಲಿ15 ನೇ ಶಾಖೆ ಶುಭಾರಂಭಗೊಳ್ಳಲಿದೆ ಎಂದ ಅಧ್ಯಕ್ಷ ಸುರೇಶ್ ಕುಲಾಲ್ ಮುಂದಿನ ದಿನದಲ್ಲಿ ಇನ್ನು 6 ಶಾಖೆಯನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.
ಬ್ಯಾಂಕಿನ ಮುಡಿಪು ಶಾಖೆಯು ಸ್ವಂತ ಕಟ್ಟಡವನ್ನು ಖರೀದಿಸಲಾಗಿದ್ದು ,ಫೆ.12 ರಂದು ಈ ಶಾಖೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.ಹಾಗೆಯೇ ಗ್ರಾಹಕರ ಅನುಕೂಲಕ್ಕಾಗಿ ಅನ್ ಲೈನ್ ಮೂಲಕ ಸೇವೆಯನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.ಸಂಘದ ಸದಸ್ಯರ ಮಕ್ಕಳಿಗೆ ಉನ್ನತವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ,ಸದಸ್ಯರಿಗೆ ಸೇಫ್ ಲಾಕರ್ ಸೌಲಭ್ಯವನ್ನು ನೀಡಲಾಗುತ್ತಿದೆ.ಸದಸ್ಯರ ಗಂಭೀರಕಾಯಿಲೆಗೆ ಆರ್ಥಿಕ ನೆರವನ್ನು ಸಂಘದಿಂದ ಒದಗಿಸಲಾಗುತ್ತಿದೆ.ಗ್ರಾಹಕರಿಗೆ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಸೌಲಭ್ಯ,10 ಸಾ.ರೂ.ಗೆ ಮೇಲ್ಪಟ್ಟ ನಿರಖು ಠೇವಣಿದಾರರಿಗೆ 1 ಲ.ರೂ.ವಿನ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.
2.85 ಕೋ.ರೂ.ಲಾಭ:
ಸಂಘವು 2021-22 ನೇ ಸಾಲಿನಲ್ಲಿ
726.08 ಕೋ.ರೂ. ವ್ಯವಹಾರ ನಡೆಸಿ ರೂ. 2.85 ಕೋ.ರೂ. ಲಾಭ ಗಳಿಸಿದೆ. ಸಂಘದ ದುಡಿಯುವ ಬಂಡವಾಳ ರೂ., 196.37 ಕೋಟಿ ರೂ.ಆಗಿದ್ದು, ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಂಘದ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ತಿಳಿಸಿದರು.
ಪ್ರಸ್ತುತ 2022 ರ ಡಿ.31ಮೂರನೇ ತ್ರೈಮಾಸಿಕ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 7497 ಸದಸ್ಯರಿದ್ದು, 7.70 ಕೋ.ರೂ.ಪಾಲುಬಂಡವಾಳ, 193.96 ಕೋ.ಠೇವಣಾತಿ, 12.89 ಕೋಟಿ ನಿಧಿಗಳು, 64,41 ಕೋ.ವಿನಿಯೋಗ, 156,29 ಕೋ.ಸಾಲಗಳು ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ 218.60 ಕೋ.ರೂ. ಆಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪದ್ಮನಾಭ ವಿ.,ನಿರ್ದೇಶಕರಾದ ಜನಾರ್ಧನ ಬೊಂಡಾಲ,ರಮೇಶ್ ಸಾಲಿಯಾನ್,ವಿಶ್ವನಾಥ ಕೆ.ಬಿ.,ಎಂ.ವಾಮನ ಟೈಲರ್,ಸುರೇಶ್ ಎನ್,ಬಿ.ರಮೇಶ್ ಸಾಲ್ಯಾನ್,ಜಗನ್ನಿವಾಸ ಗೌಡ ಉಪಸ್ಥಿತರಿದ್ದರು.