ಬಂಟ್ವಾಳ: ಇಲ್ಲಿನ ಶ್ರೀಲಕ್ಷ್ಮೀ ನರಸಿಂಹ ಪೈ ವಿದ್ಯಾಲಯ ಪಾಣೆಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಪಂಚಮಿ ಕೆ. ಶಿವಮೊಗ್ಗದ ಡಿ.ವಿ.ಎಸ್. ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಡಾ. ಕಿರಣ ಕೆ. ಯು ಮತ್ತು ಡಾ.ಪ್ರಮೀಳಾ ಕೆ. ದಂಪತಿಗಳ ಪುತ್ರಿಯಾಗಿರುವ ಪಂಚಮಿ ಕೆ. ತನ್ನ ಆರನೇ ವಯಸ್ಸಿನಿಂದಲೇ ಗುರುಗಳಾದ ವಿದುಷಿ ಮಂಜುಳಾ ಜಿ.ರಾವ್ ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಚಿತ್ರಕಲೆ, ನೃತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ಪ್ರತಿಭಾನ್ವಿತೆ. 2017-18 ರ ಕ್ಲಸ್ಟರ್ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಕ್ತಿಗೀತೆ ಗಾಯನ ವಿಭಾಗದಲ್ಲಿ ಪ್ರಥಮ, ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ೨೦೧೯-೨೦ ರ ಕ್ಲಸ್ಟರ್ ಪ್ರತಿಭಾ ಕಾರಂಜಿಯ ಭಕ್ತಿಗೀತೆ ಗಾಯನ ವಿಭಾಗದಲ್ಲಿ ದ್ವಿತೀಯ ಸ್ಥಾನ, ಪ್ರತಿಭಾ ಕಾರಂಜಿಯ ಜನಪದ ಗೀತೆ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು.
