ಬಂಟ್ವಾಳ: ಕರ್ನಾಟಕ- ತಮಿಳುನಾಡು ಗಡಿಭಾಗ, ಚಾಮರಾಜನಗರ, ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಣಸಿಗುವ ಬುಡಕಟ್ಟು ಆದಿವಾಸಿಗಳಾದ ಸೋಲಿಗರ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ವಾಮದಪದವಿನ ಸರಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಅನಾವರಣಗೊಂಡಿತು. ಬಸವರಾಜ್ ನೇತೃತ್ವದ ಸೋಲಿಗರ ತಂಡ ಜನಪದ ಹಾಡು, ನೃತ್ಯ ಪ್ರಾಕಾರಗಳೊಂದಿಗೆ ಸೋಲಿಗರ ಜೀವನ ವ್ಯವಸ್ಥೆಯನ್ನು ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟಿತು. ಸೋಲಿಗರ ಸಾಂಪ್ರದಾಯಿಕ ನೃತ್ಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು, ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಆದಿವಾಸಿಗಳು ಈ ನೆಲದ ಮೂಲ ನಿವಾಸಿಗಳು. ತಮ್ಮದೇ ಆದ ಸಾಂಸ್ಕೃತಿಕ, ಸಾಮಾಜಿಕ ಬದುಕನ್ನು ಕಟ್ಟಿಕೊಂಡಿರುವ ಅವರು ಪ್ರಕೃತಿ ಹಾಗೂ ಪ್ರಕೃತಿ ಸಂಪನ್ಮೂಲಗಳನ್ನು ತಮ್ಮ ಬದುಕಿಗಾಗಿ ಅವಲಂಬಿಸಿಕೊಂಡಿದ್ದಾರೆ. ಇಂತಹ ಬುಡಕಟ್ಟು ಜನಾಂಗದವರು ತಮ್ಮದೇ ಆದ ಸಂಗೀತ, ನೃತ್ಯ, ಸಂಗೀತ ಪರಿಕರಗಳನ್ನು ಹೊಂದಿತ್ತು, ಅವುಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಕಾಡಿನೊಳಗೆ ಬದುಕು ಸಾಗಿಸುವ ಸೋಲಿಗರ ಸಾಂಸ್ಕೃತಿಕ ವೈವಿಧ್ಯತೆ ಅಳಿವಿನಂಚಿಗೆ ಸಾಗುತ್ತಿದ್ದು ಇದನ್ನು ಉಳಿಸಿ ಬೆಳೆಸುವುದರ ಜೊತೆಗೆ ಇಂದಿನ ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಉದ್ದೇಶದಿಂದ ಆಯೋಜಿಸಿದ ಕಾರ್ಯಕ್ರಮ ಕಾಲೇಜ್ ಕ್ಯಾಂಪಸ್ನಲ್ಲಿ ಆದಿವಾಸಿಗಳ ಹೊಸ ಲೋಕವನ್ನು ತೆರೆದಿಟ್ಟಿತು.
ಉದ್ಘಾಟನಾ ಕಾರ್ಯಕ್ರಮ:
ರಾಜ್ಯಮಟ್ಟದ ಒಂದು ದಿನದ ಸೋಲಿಗ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಜಿಲ್ಲಾ ಸ್ವಚ್ಚತಾ ರಾಯಭಾರಿ ಎನ್. ಶೀನಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಸಮಾಜದ ಮೂಲ ಬೇರು ಸೋಲಿಗ ಆದಿವಾಸಿಗಳು. ಇಲ್ಲಿ ಮನಸ್ಸು ಕಟ್ಟುವ, ಪ್ರೀತಿ ಹಂಚುವ ಉತ್ತಮವಾದ ಕಾರ್ಯಕ್ರಮ ನಡೆದಿದೆ. ಇಂದಿನ ಮಕ್ಕಳಿಗೆ ಆದರ್ಶದ ಕೊರತೆಯಿದ್ದು ಅದನ್ನು ತುಂಬುವ ಪ್ರಯತ್ನವನ್ನು ಇಲ್ಲಿನ ಉಪನ್ಯಾಸಕರು ಮಾಡಿದ್ದಾರೆ` ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಪತ್ರಕರ್ತ ಸಂದೀಪ್ ಸಾಲ್ಯಾನ್, ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಪಕ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ, ಎನ್.ಆರ್.ಪುರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಡಾ. ಮೇರಿ ಎಂ.ಜೆ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಗಣಿತ ಶಾಸ್ತ್ರ ವಿಣಾಗ ಮುಖ್ಯಸ್ಥೆ ಪ್ರೊ. ಸವಿತಾ ಬಿ., ಸಮಾಜ ಕಾಐ ವಿಭಾಗದ ಮುಖ್ಯಸ್ಥ ಚಂದ್ರ ಎಸ್. ಭಾಗವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಮತ್ತ ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ. ಶ್ರೀಧರ್ ಕೆ. ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಆತಂರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ. ವಿಶಾಲ್ ಪಿಂಟೋ ವಂದಿಸಿದರು. ವಿದ್ಯಾರ್ಥಿನಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಸೋಲಿಗರು ರೊಟ್ಟಿ ಹಬ್ಬ, ಗೌಜಲಕ್ಕಿ ನೃತ್ಯ ಮತ್ತಿತರ ಸೋಲಿಗರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಪ್ಪತ್ತಕಿಂತಲೂ ಹೆಚ್ಚು ಮಂದಿ ಸೋಲಿಗ ಕಲಾವಿದರು ಪ್ರದರ್ಶಿಸಿದರು. ಹೆಣೆದ ತೆಂಗಿನ ಗರಿಯ ಚಪ್ಪರ, ಸಭಾ ವೇದಿಕೆಯ ಅಲಂಕಾರ, ಸೆಗಣಿ ಸಾರಿಸಿದ ಅಂಗಣ ವಿಶೇಷ ಗಮನ ಸೆಳೆಯಿತು.
