
ಬಂಟ್ವಾಳ: ಸಜೀಪ ಮಾಗಣೆಯ ಶ್ರೀ ನಾಲ್ಕೈತ್ತಾಯ ದೈವದ ಗಡಿ ಪ್ರಧಾನರಾಗಿ ಸಜೀಪಗುತ್ತು ಮನೆತನದ ಮುತ್ತಣ್ಣ ಶೆಟ್ಟಿ ನೇಮಕಗೊಂಡಿದ್ದಾರೆ.
ಸಜೀಪ ಗುತ್ತು ಮನೆತನದ ಹಿರಿಯರು – ಕಿರಿಯರು ಸೇರಿ ಸಜೀಪ ಮಾಗಣಿ ಶ್ರೀ ನಡಿಯೇಲು ದೈವಂಗಳ ಅಪ್ಪಣೆ ಪಡೆದು ಶ್ರೀ ನಾಲ್ಕೈತ್ತಾಯ ದೈವದ ಅನುಮತಿಯೊಂದಿಗೆ, ಇತ್ತೀಚೆಗೆ ನಡೆದ ಸಜೀಪ ಮಾಗಣೆ ಶ್ರೀ ಮಿತ್ತಮಜಲು ಕ್ಷೇತ್ರದ ವಾರ್ಷಿಕ ಬಿಸು ಜಾತ್ರೆಯಲ್ಲಿ ಗಡಿ ಬೂಳ್ಯ ನೀಡಿ ಗಡಿ ಪ್ರಧಾನರ ನೇಮಕ ಮಾಡಲಾಯಿತು.
ಮಾಗಣೆಯ ಕಟ್ಟುಕಟ್ಟಳೆಯ ಪ್ರಕಾರ ಮಂಗಳವಾರದಂದು ಅರಸು ದೈವಂಗಳ ನೇಮದಲ್ಲಿ ಮಾಗಣೆಯ ಗುತ್ತು ಬರ್ಕೆಯ ಪ್ರಮುಖರ ಉಪಸ್ಥಿತಿಯಲ್ಲಿ, ಮಾಗಣೆಯ ತಂತ್ರಿಗಳು ದೈವಂಗಳ ಅಪ್ಪಣೆಯಂತೆ ಕಲಶ ಸ್ನಾನ ಮಾಡಿಸಿ ಸಜೀಪ ಗುತ್ತು ಮನೆತನದವರ ಸಮಕ್ಷಮದಲ್ಲಿ ದೈವಂಗಳು ಕಾಳಪ್ಪ ಶೆಟ್ಟಿ ಎಂಬ ಹೆಸರನ್ನಿತ್ತು ಗಡಿಬೂಳ್ಯ ನೀಡಿ, ಗಡಿ ಪ್ರಧಾನರಾಗಿ ಮುತ್ತಣ್ಣ ಶೆಟ್ಟಿಯವರನ್ನು ನೇಮಕ ಮಾಡಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಪಾಲೆ ಮಂಟಮೆ ಸಂಸಾರ, ಕಾಂತಾಡಿ ಗುತ್ತು ಗಡಿಪ್ರಧಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜಂದಾರ್ ಗುತ್ತು ಶಿವರಾಮ ಭಂಡಾರಿ, ಮಾಡದಾರಗುತ್ತು ಶಶಿಧರ ರೈ ಯಾನೆ ನಾರ್ಣ ಆಳ್ವ, ನಗ್ರಿಗುತ್ತುವಿನ ಜಯರಾಮ್ ಶೆಟ್ಟಿ ಮತ್ತು ವಿವೇಕ್ ಶೆಟ್ಟಿ, ಅಗರಿ ಜೀವನ್ ಆಳ್ವ, ಹರೀಶ್ ರೈ, ಸಂಕೇಶ ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜ ಬರಂಗರೆ, ಪಡ್ಡೋಳಿ ಬಾಳಿಕೆ, ಅಂಕದ ಕೋಡಿ ಮನೆತನದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Advertisement







