ಬಂಟ್ವಾಳ: ೪೦೦ ಕೆವಿ ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದ ಬಂಟ್ವಾಳ ಕಸ್ಬಾ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಿಕೆ ಎಂಬಲ್ಲಿಗೆ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಪುಣಚ ಅವರ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು, ಸಂತ್ರಸ್ತ ರೈತರು ಹಾಗೂ ಗ್ರಾಮಸ್ಥರು ಮುತ್ತಿಗೆ ಹಾಕಿ ಕಾಮಗಾರಿಗೆ ನಡೆಸದಂತೆ ತಡೆಯೊಡಿದ್ದಾರೆ.
ಗುರುವಾರ ಮಧ್ಯಾಹ್ನದ ವೇಳೆಗೆ ಕಾಮಗಾರಿ ನಡೆಯುತ್ತಿದ್ದ ದರ್ಬಳಿಕೆಗೆ ಬಂದ ರೈತ ಸಂಘದ ಮುಖಂಡರು ಎರಡು ಜೆಸಿಬಿಗಳ ಮೂಲಕ ಮಣ್ಣು ತೋಡುವ ಕೆಲಸವನ್ನು ನಿಲ್ಲಿಸಿ ಕಾಮಗಾರಿ ನಡೆಸದಂತೆ ಗುತ್ತಿಗೆ ಕಂಪೆನಿಯ ಕಾರ್ಮಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಒಂದು ವ್ಯಾನ್ ಪೊಲೀಸರನ್ನು ನಿಯೋಜಿಸಿ ಕಾಮಗಾರಿ ನಡೆಯುತ್ತಿದ್ದರೂ ಕ್ಯಾರೇ ಎನ್ನದ ರೈತ ಸಂಘದ ಮುಖಂಡರು ಕಾಮಗಾರಿ ನಿಲ್ಲಿಸಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ., ಹಾಗೂ ಎಸೈ ರಾಮಕೃಷ್ಣ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವಂತೆ ರೈತ ಸಂಘದ ಮುಖಂಡರಲ್ಲಿ ವಿನಂತಿಸಿಕೊಂಡರೂ ಜಗ್ಗದೆ ಇದ್ದಾಗ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ೪೦೦ ಕೆವಿ ವಿದ್ಯುತ್ ಪ್ರಸರಣದ ಟವರ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ನಲ್ಲಿ ಕೇಸ್ ನಡೆಯುತ್ತಿದ್ದು ಎಸ್ಒಪಿ ಜಾರಿಯಾಗದೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ರೈತ ಸಂಘ ಪಟ್ಟು ಹಿಡಿದು ರಸ್ತೆಯಲ್ಲಿಯೇ ಧರಣಿ ಕುಳಿತರು. ಈ ನಡುವೆ ಸಹಾಯಕ ಆಯುಕ್ತ ಹರ್ಷವರ್ಧನ್ ಅವರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದಾಗಲೂ ಅವರು ಕರೆ ಸ್ವೀಕರಿಸಿರಲಿಲ್ಲ, ತಹಶೀಲ್ದಾರ್ ಅರ್ಚನ್ ಭಟ್ ಅವರಿಗೆ ಕರೆ ಮಾಡಿ ಆದೇಶ ಪತ್ರವನ್ನು ಸ್ಥಳಕ್ಕೆ ತರುವಂತೆ ತಿಳಿಸಿದಾಗ ಕರೆ ಕಟ್ ಮಾಡಿರುವುದಾಗಿ ಶ್ರೀಧರ್ ಶೆಟ್ಟಿ ಆರೋಪಿಸಿದರು.
ಬಂಟ್ವಾಳ ತಾಲೂಕಿನ ೯೩ ಕಡೆಗಳಲ್ಲಿ ಟವರ್ ನಿರ್ಮಾಣ ಕಾರ್ಯ ನಡೆಯಬೇಕಾಗಿದ್ದು ಇಲ್ಲಿ ಮಧ್ಯಭಾಗದಿಂದ ಕಾಮಗಾರಿ ಆರಂಭಿಸಿರುವ ಉದ್ದೇಶ ಏನು? ಎಂದು ಪ್ರತಿಭಟನಕಾರರು ಪ್ರಶ್ನೆ ಮಾಡಿದರು.
ಕಳೆದ ಮಂಗಳವಾರ ದರ್ಬಳಿಕೆಯ್ಲಲಿ ೪೦೦ ಕೆವಿ ವಿದ್ಯುತ್ ಪ್ರಸರಣದ ತಂತಿ ಅಳವಡಿಸಲು ಟವರ್ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಂತ್ರಸ್ತ ರೈತರು ರೈತ ಸಂಘದ ಓಸ್ವಾಲ್ಡ್ ಪ್ರಕಾಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸ್ಥಳಕ್ಕೆ ಬಂದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ತಹಶೀಲ್ದಾರ್ ಅರ್ಚನ ಭಟ್ ಪ್ರತಿಭಟನಕಾರರನ್ನು ಮನವೊಲಿಸಿ ಕಾಮಗಾರಿ ಆರಂಭಿಸಲು ಅನುವು ಮಾಡಿಕೊಟ್ಟಿದ್ದರು. ಇದೀಗ ಜನವಿರೋಧಿ ಕಾಮಗಾರಿಯ ಬಗ್ಗೆ ಮತ್ತೊಮ್ಮೆ ಶ್ರೀಧರ ಶೆಟ್ಟಿಯವರ ನೇತೃತ್ವದಲ್ಲಿ ರೈತಸಂಘ ದರ್ಬಳಿಕೆಯಲ್ಲಿ ಹೋರಾಟ ಮುಂದುವರೆಸಿದೆ.
ಕಾಮಗಾರಿ ಪುನಾರಂಭ
ರೈತ ಸಂಘ ಹಾಗೂ ಸ್ಥಳೀಯ ಸಂತ್ರಸ್ತ ರೈತರ ವಿರೋಧದ ನುವಡೆಯೂ ತಹಶೀಲ್ದಾರ್ ಅವರ ಸೂಚನೆಯಂತೆ ಕಾಮಗಾರಿ ಸಂಜೆಯ ವೇಳೆಗ ಪುನಾರಂಭಗೊಂಡಿತು. ಜಿಲ್ಲಾಧಿಕಾರಿಯವರ ಮೌಖಿಕ ಆದೇಶದಂತೆ ಕಾಮಗಾರಿ ನಡೆಸಲು ತಹಸೀಲ್ದಾರ್ ಸೂಚನೆ ನೀಡಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಶ್ರೀಧರ ಶೆಟ್ಟಿ ಆರೋಪಿಸಿದ್ದಾರೆ.
ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ, ರೈತ ಸಂಘ ಹಸಿರು ಸೇನೆಯ ಪ್ರಮುಖರಾದ ಆನಂದ ಸಾಲ್ಯಾನ್, ಚಿತ್ತರಂಜನ್, ರೋಹಿತಾಶ್ವ, ರಾಜೀವ ಗೌಡ, ಶಿವಚಂದ್ರ, ಧನು ಮಂಜನಾಡಿ, ಅಣ್ಣುಗೌಡ, ಹರೀಶ್ ನಾಯ್ಕ್ ಪುಣಚ ಬೆನಡಿಕ್ಟ್ ಕಾರ್ಲೋ, ಬೂಡ ಸದಸ್ಯ ಮನೋಹರ ನೇರಂಬೋಳು, ರೋಷನ್ ಡಿಸೋಜಾ ಕಂದಾಯ ನಿರೀಕ್ಷಕ ಜನಾರ್ದನ, ವಿ.ಎ. ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಹೆಸರು ಕೊಡಿ:
ಪ್ರತಿಭಟನೆಯ ವೇಳೆ ಸ್ಥಳಲ್ಲಿ ಹಾಜರಿದ್ದ ಹಾಗೂ ಘಟನಾ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದ ಸ್ಥಳೀಯ ಯುವಕರನ್ನು ಒತ್ತಾಯಪೂರ್ವಕವಾಗಿ ಹೆಸರು ಕೊಡಿ ಎಂದು ಪೊಲೀಸರು ಸತಾಯಿಸುತ್ತಿದ್ದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಹೆಸರು ಪಡೆದುಕೊಂಡು ನೀವೇನು ಪೆನ್ಶನ್ ನೀಡುತ್ತಿರಾ ಎಂದು ಶ್ರೀಧರ್ ಶೆಟ್ಟಿ ಪೊಲೀಸರಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದರು.