
ಬಂಟ್ವಾಳ: ಕುಟುಂಬದ ಮನೆ ತಾಯಿ ಬೇರು ಇದ್ದಂತೆ.
ದೈವದ ಹೆಸರಿನಲ್ಲಿ ಕುಟುಂಬದ ಬಂಧುಗಳನ್ನು ಸೇರಿಸುವ ಕೆಲಸವನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದು
ಇದರಿಂದ ಕುಟುಂಬದ ಸದಸ್ಯರನ್ನು ಮುಖತ: ಭೇಟಿಯಾಗಲು ಸಾಧ್ಯವಿದೆ. ಸಂಬಂಧವನ್ನು ಪರಸ್ಪರ ಗಟ್ಟಿಗೊಳಿಸಲು ಸಾಧ್ಯವಿದೆ. ಇಂತಹ ಅವಕಾಶವನ್ನು ಕುಟುಂಬದ ಸದಸ್ಯರು ಬಳಸಿಕೊಳ್ಳಬೇಕು ಎಂದು ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಹೇಳಿದರು.
ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ ಕಲ್ಕಾರು ಇದರ ಕುಟುಂಬ ದೈವ ದೇವರುಗಳ ವಾರ್ಷಿಕ ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಕುಟುಂಬದ ಮನೆಯಲ್ಲಿ ಜೀವ ಜೀವಂತಿಕೆ ಮುಖಮುಖಿಯಾಗಬೇಕು. ಆ ಕಾರಣಕ್ಕಾಗಿ ಪ್ರತಿಯೊಬ್ಬರು ಕುಟುಂಬದ ಮನೆಗೆ ಬರಬೇಕು. ಹಿರಿಯರಿಂದ ಬಂದ ಕುಟುಂಬದ ಪರಂಪರೆಯನ್ನು ಕಿರಿಯರಿಗೆ ತಿಳಿಸಿಕೊಡುವ ಕಾರ್ಯ ಆಗಬೇಕು ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ದೀಪ ಪ್ರಜ್ವಲಿಸಿ ಮಾತನಾಡಿ ತನಗೂ ಕಲ್ಕಾರ್ ಕುಟುಂಬಕ್ಕೂ ಇರುವ ಸಂಬಂಧದ ಬಗ್ಗೆ ತಿಳಿಸಿದರು. ಕುಟುಂಬದ ಸದಸ್ಯರನ್ನು ಒಟ್ಟು ಸೇರಿಸಿ ಕುಟುಂಬ ಪದ್ದತಿಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಿಳಿಸಿ ಕೊಡವ ಕಾರ್ಯ ಅಭಿನಂದನೀಯ ಎಂದರು.


ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಲ್ಕಾರು ಕುಟುಂಬದ ಒಗ್ಗಟ್ಟು ಪ್ರೀತಿ ಇಲ್ಲಿ ಕಾಣುತ್ತಿದೆ. ಧಾರ್ಮಿಕ ಸಭಾ ಕಾರ್ಯಕ್ರಮಕ್ಕೂ ದೊಡ್ಡ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು ಭಾಗವಹಿಸುತ್ತಿರುವ ದೃಶ್ಯವನ್ನು ಇಲ್ಲಿ ಕಾಣುತ್ತಿದ್ದೇವೆ ಎಂದರು.
ಕಲ್ಕಾರು ದೈವ ದೇವರುಗಳ ಸಮಿತಿಯ ಅಧ್ಯಕ್ಷ , ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಕೆ. ಸೀತರಾಮ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಟುಂಬದ ಸದಸ್ಯರಿಗೆ ದೈವ ದೇವರು, ಕುಟುಂಬ ಪದ್ದತಿಯ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ವಾರ್ಷಿಕ ನೇಮೋತ್ಸವದ ಕಾರ್ಯಕ್ರಮದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಪಿಯೂಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಿ. ಪುಷ್ಪಾವತಿ ವಿಶ್ವನಾಥ ರೈ ಕಲ್ಕಾರು ಕೆಂಜಿಲ ಸ್ಮರಣಾರ್ಥ ವಿದ್ಯಾರ್ಥಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಯಕ್ಷ ಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ
ಪಟ್ಲ ಸತೀಶ್ ಶೆಟ್ಟಿ, ಕುಟುಂಬದ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೀವ ಶೆಟ್ಟಿ ಎಡ್ತೂರು ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಗಣಹೋಮ, ನಾಗತಂಬಿಲ, ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನದ ಬಳಿಕ ಪಟ್ಲ ಸತೀಶ್ ಶೆಟ್ಟಿ ಸಂಯೋಜನೆಯಲ್ಲಿ ಭಕ್ತ ಸುಧಾಮ, ಸಹಕುಟುಂಬ ಸದಸ್ಯರಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ನಡೆಯಿತು.
Advertisement







