ಬಂಟ್ವಾಳ: ಪುದು ಗ್ರಾಮದ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿಯೇ ಇರುವ ಸುಜೀರು ಶ್ರೀ ದೇವಕಿ ಕೃಷ್ಣ ರವಳನಾಥ ದೇವಸ್ಥಾನದಲ್ಲಿ ಸೋಮವಾರ ಪ್ರಾಥಃ ಕಾಲದ ವೇಳೆ ಕಳ್ಳರು ನುಗ್ಗಿ ಚಿನ್ನ ಬೆಳಿ ಸಹಿತ ಹುಂಡಿಯಲ್ಲಿದ್ದ ಕಾಣಿಕೆಯನ್ನು ದೋಚಿ ಪರಾರಿಯಾಗಿದ್ದಾರೆ. ಮೂರು ಮಂದಿ ಕಳ್ಳರು ದೇವಸ್ಥಾನದ ಒಳನುಗ್ಗಿ ಗರ್ಭಗುಡಿ ಪ್ರವೇಶಿಸಿ ಸೊತ್ತುಗಳನ್ನು ಕಳವುಗೈಯ್ಯುತ್ತಿರುವ ದೃಶ್ಯಗಳು ಸಿಸಿ ಟವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.

ಸುಜೀರ್ಕಾರ್ಸ್ ಕುಟುಂಬಕ್ಕೆ ಸಂಬಂಧಪಟ್ಟ ದೇವಸ್ಥಾನ ಇದಾಗಿದ್ದು ಭಾನುವಾರ ಇಲ್ಲಿ ದೀಪಾವಳಿ ಆಚರಣೆ ಸಂಭ್ರಮದಿಂದ ನಡೆದಿತ್ತು. ಮಧ್ಯರಾತ್ರಿಯ ಬಳಿಕ ಕಳ್ಳರು ನುಗ್ಗಿ ಬೆಳ್ಳಿಯ ದೀಪಗಳು, ಗಿಂಡೆ, ಚೊಂಬು, ಪ್ರಭಾವಳಿಯ ಮೇಲಿಡುವ ಚಿನ್ನದ ಸಣ್ಣ ಕೊಡೆ, ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಎಗರಿಸಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


