
ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮೂಲಕ ದೀನ ದುರ್ಬಲರಿಗೆ ನೆರವಿನ ಮೂಲಕ ದೊಡ್ಡ ತಪಸ್ಸಿನ ಕಾರ್ಯ ನಡೆಯುತ್ತಿದ್ದು, ಇದು ಸನ್ಯಾಸಿಗಳ ತ್ಯಾಗಕ್ಕಿಂತಲೂ ಮಿಗಿಲಾದ ಸೇವೆಯಾಗಿದೆ. ಇಂತಹ ಸಂಸ್ಥೆಗಳಿಗೆ ನಾವೆಲ್ಲರೂ ದಾನಿಗಳನ್ನು ಕರೆ ತರುವ ಕಾರ್ಯ ಮಾಡಬೇಕಿದೆ. ಕ್ಷಯ ರೋಗಿಗಳಿಗೆ ದೇಹದ ಮೇಲೆ ಔಷಧ ಕೆಲಸ ಮಾಡಬೇಕಾದರೆ ಪೌಷ್ಟಿಕಾಹಾರ ಅಗತ್ಯ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.


ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಢಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆಹಾರ ದವಸ ಧಾನ್ಯದ ಕಿಟ್ ವಿತರಿಸಿ ಅವರು ಆಶೀರ್ವಚನ ನೀಡಿದರು.

ಸೇವಾಂಜಲಿ ಪ್ರತಿಷ್ಠಾನದಿಂದ ಆಡಳಿತ ಟ್ರಸ್ಟಿ ಕೆ.ಕೃಕುಮಾರ್ ಪೂಂಜ ಪ್ರಸ್ತಾವನೆಗೈದು, ದೇಶವು 2025ಕ್ಕೆ ಕ್ಷಯ ಮುಕ್ತ ಭಾರತ ಆಗಬೇಕು ಎಂಬ ಪ್ರಧಾನಿಗಳ ಆಶಯಕ್ಕೆ ಪೂರಕವಾಗಿ ಪ್ರತಿಷ್ಠಾನವು ಪ್ರತಿ ತಿಂಗಳು ಕ್ಷಯರೋಗಿಗಳಿಗೆ 10 ಬಗೆಯ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, ಒಂದು ರೋಗಿಗೆ ತಲಾ 6 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ಈವರೆಗೆ 98 ರೋಗಿಗಳಿಗೆ 6 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಪ್ರತಿಷ್ಠಾನವು ವಾರ್ಷಿಕವಾಗಿ ವಿವಿಧ ಸೇವಾ ಕಾರ್ಯಗಳಿಗೆ 24 ಲಕ್ಷ ರೂ.ಗಳನ್ನು ಮೀಸಲಿಡುತ್ತಿದೆ ಎಂದರು.

ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ, ವಿಕಲ ಚೇತನೆ ಕೂರಿಯಳ ಗ್ರಾಮದ ದುರ್ಗಾನಗರ ನಿವಾಸಿ ಭಾಗ್ಯಶ್ರೀ ಅವರ ಎಂ.ಕಾಂ ವಿದ್ಯಾಭ್ಯಾಸಕ್ಕೆ ಮುಂಬೈಯ ಉದ್ಯಮಿ ಕೊಂಜಲಗುತ್ತು ದಿವಾಕರ ಶೆಟ್ಟಿ ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕೊಡಮಾಡಿದ 20 ಸಾವಿರ ರೂ. ನ ಚೆಕ್ ಅನ್ನು ಮಾಣಿಲ ಶ್ರೀಗಳು ಹಸ್ತಾಂತರಿಸಿದರು.

ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ತಾ.ಪಂ. ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ತುಂಬೆ, ಡಾ. ಚೇತನ್ ಕ್ಷಯ ರೋಗದ ಬಗ್ಗೆ ಆರೋಗ್ಯ ಮಾಹಿತಿ ನೀಡಿದರು.ಪ್ರಮುಕರಾದ ಪದ್ಮನಾಭ ಶೆಟ್ಟಿ ಪುಂಚಮೆ, ಪ್ರವೀಣ್ ಕಬೇಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೃಷ್ಣ ತುಪ್ಪೆಕಲ್ಲು, ಆರ್. ಎಸ್. ಜಯ, ಪ್ರಶಾಂತ್ ತುಂಬೆ ವಿಕ್ರಂ ಬರ್ಕೆ, ಸುಕುಮಾರ್ ಅರ್ಕುಳ, ಎ.ಕೆ.ಗಿರೀಶ್ ಕುಂಪಣಮಜಲು, ಮೋಹನ್ ಬಿ. ಸಾಲ್ಯಾನ್ ಬೆಂಜನಪದವು ಸಹಕರಿಸಿದರು.
ಟ್ರಸ್ಟಿಗಳಾದ ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಕೊಡ್ಮಾನ್ ದೇವದಾಸ್ ಶೆಟ್ಟಿ ವಂದಿಸಿದರು.
