ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಮೈಂದಾಳ ಕೆಮ್ಮಟೆ ಎಂಬಲ್ಲಿ ದಾನಿಗಳು, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಡಕುಟುಂಬದ ರೇವತಿ ಪೂಜಾರಿಯವರಿಗೆ ನಿರ್ಮಾಣಗೊಂಡ ಶ್ರೀ ದುರ್ಗಾ ನಿವಾಸದ ಗೃಹಪ್ರವೇಶ ಭಾನುವಾರ ನಡೆಯಿತು.
ಬಳಿಕ ನಡೆದ ಕೃತಜ್ಞತಾ ಸಭೆಯಲ್ಲಿ ಮಂಜೇಶ್ವರ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಜೋಸೆಫ್ ಕ್ರಾಸ್ತ ಮನೆಮಂದಿಗೆ ಕೀ ಹಸ್ತಾಂತರಿಸಿ ಮಾತನಾಡಿ ಸರ್ವ ಧರ್ಮದ ದಾನಿಗಳ ನೆರವಿನಿಂದ ರೇವತಿ ಅವರಿಗೆ ಸುಂದರ ನಿರ್ಮಾಣಗೊಂಡಿದೆ. ಮನೆ ನಿರ್ಮಾಣದ ವೇಳೆ ಸಾಕಷ್ಟು ತೊಂದರೆಗಳು ಬರುವುದು ಸಹಜ, ಅವೆಲ್ಲವನ್ನು ಮೀರಿ ಮನೆ ನಿರ್ಮಾಣದಂತಹ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮಾನವ ಧರ್ಮ ಎಂದು ತಿಳಿಸಿದರು.
ಅಟೋಮೇಶನ್ ಕ್ಲೌಡ್ ಸೊಲ್ಯುಷನ್ ಸಂಸ್ಥೆಯ ಅಧ್ಯಕ್ಷ ಜಗದೀಶ್ ರಾಮ ಉಡುಗೊರೆ ಹಸ್ತಾಂತರಿಸಿ ಶುಭಾಶಯ ಕೋರಿದರು. ಉದಯ ಯುವಕ ಮಂಡಲ ಅಧ್ಯಕ್ಷ ರಿತೇಶ್ ಅಬ್ಬೆಟ್ಟು, ಹೊಟೇಲ್ ಉದ್ಯಮಿ ಸದಾನಂದ ಬಂಗೇರ, ಯುವವಾಹಿನಿ ಮಂಗಳೂರು ಮಹಿಳಾ ಸಮಿತಿ ಅಧ್ಯಕ್ಷೆ ಶುಭಾ ರಾಜೇಂದ್ರ, ತುಳುನಾಡು ಸೇವಾ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಸಿ ವಿಜಯ ಕುಮಾರ್ ಅಮ್ಟಾಡಿ, ನಾವೂರು ಗ್ರಾ.ಪಂ. ಅಧ್ಯಕ್ಷ ಉಮೇಶ್ ಕುಲಾಲ್ ನಾವೂರು, ಹೆಲ್ಪಿಂಗ್ ಇಸ್ರೇಲ್ ಟ್ರಸ್ಟ್ ನ ಸುನೀಲ್ ಮೆಂಡೋನ್ಸಾ, ಆಸರೆ ತಂಡದ ಮುಖ್ಯಸ್ಥ ನಿತಿನ್ ತೇವುಕಾಡು ಉಪಸ್ಥಿತರಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ ಹಾಗೂ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್ ಮನೆಗೆ ಭೇಟಿ ನೀಡಿದರು. ಮೋಹನ್ದಾಸ್ ಮರಕಡ ಕಾರ್ಯಕ್ರಮ ನಿರೂಪಿಸಿದರು.