ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನ ನೀರು ಹರಿದುಹೋಗುವ ರಭಸಕ್ಕೆ ಕೆಳಭಾಗದ ಕೃಷಿ ಭೂಮಿ ಕೊಚ್ಚಿ ಹೋದ ಸ್ಥಳಕ್ಕೆ ಒಂದೆಡೆ ಕಲ್ಲು ಹಾಕಿ ತಡೆಗೋಡೆ ನಿರ್ಮಿಸುವ ಕಾರ್ಯ ನಡೆಯುತ್ತಿದ್ದರೆ ಇನ್ನೊಂದೆಡೆ ಮತ್ತೆ ಮಣ್ಣು ಕುಸಿದು ಕೃಷಿ ಭೂಮಿ ನದಿಪಾಲಾಗುತ್ತಿದೆ. ಜಮೀನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುವ ಸಂತ್ರಸ್ತ ರೈತರಲ್ಲಿ ಭೂ ಕುಸಿತ ಮತ್ತೆ ಆತಂಕ ಹುಟ್ಟಿಸಿದೆ.
ತುಂಬೆ ಡ್ಯಾಂನಿಂದ ನೀರು ಹರಿದು ಹೋಗುವ ರಭಸಕ್ಕೆ ಡ್ಯಾಂನ ಕೆಳ ಭಾಗದ ಬಲ ಪಾರ್ಶದಲ್ಲಿ ಸುಮಾರು ೯ ಮಂದಿ ರೈತರಿಗೆ ಸೇರಿದ ಕೃಷಿ ಭೂಮಿ ಕೊಚ್ಚಿಹೋಗಿ ರೈತರು ಸಂಕಷ್ಟ ಅನುಭವಿಸಿದ್ದಾರೆ. ತಮ್ಮ ಕಣ್ಣೆದುರೇ ತಾವು ಬೆಳೆದ ಅಪಾರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಮರ ನದಿಗೆ ಆಹುತಿಯಾಗಿದೆ. ಇತ್ತೀಚಿಗೆ ರೈತ ಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಸ್ಥಳೀಯ ರೈತರು ತುಂಬೆ ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿ ಕೃಷಿ ಭೂಮಿ ಕಳಕೊಂಡ ರೈತರಿಗೆ ಪರಿಹಾರ ಹಾಗೂ ಪರ್ಯಯ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಮನಪಾ ಆಯುಕ್ತ ರೈತರ ಬೇಡಿಕೆಗಳಿಗೆ ಸ್ಪಂದಿಸಿದ್ದರು. ಇದೀಗ ಮಣ್ಣು ಕುಸಿದ ಜಾಗದಿಂದ ಸೀವಾಲ್ನಂತೆ ಬಂಡೆಕಲ್ಲುಗಳನ್ನು ಹಾಕಿ ತಡೆಗೋಡೆ ನಿರ್ಮಿಸುವ ಕಾರ್ಯ ಆರಂಭಗೊಂಡಿದೆ.
ಮತ್ತೆ ಕುಸಿದ ಮಣ್ಣು:
ನದಿ ತೀರದ ಮಣ್ಣು ಕುಸಿದು ಎಕರೆ ಗಟ್ಟಲೆ ಕೃಷಿ ಭೂಮಿ ನದಿಪಾಲಾಗಿ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತಡೆಗೋಡೆ ನಿರ್ಮಾಣ ಕಾಮಗಾರಿ ತಡವಾಗಿ ಆರಂಭಗೊಂಡಿರುವುದರಿಂದ ಸ್ವಲ್ಪ ಸ್ವಲ್ಪವೇ ಮಣ್ಣು ಕುಸಿಯುತ್ತಾ ನದಿ ಸೇರುತ್ತಿದೆ. ಸೋಮವಾರ ಬೆಳಿಗ್ಗೆಯೂ ಭಾಸ್ಕರ ಎಂಬವರಿಗೆ ಸೇರಿದ ಜಮೀನಿನ ಭಾಗದಿಂದ ಮಣ್ಣು ಕುಸಿದು ನದಿ ಸೇರಿದೆ. ಇದೇ ದಿನ ತುಂಬೆಯಲ್ಲಿ ಗಂಗಾಪೂಜೆ, ಬಾಗಿನ ಅರ್ಪಣೆ ಕಾರ್ಯಕ್ರಮ ನಡೆದಿದ್ದು ಮೇಯರ್, ಆಯುಕ್ತರು ಸಹಿತ ಮನಾಪ ಆ ಸದಸ್ಯರು ತುಂಬೆ ಡ್ಯಾಂಗೆ ಭೇಟಿ ನೀಡಿದ್ದರು. ಸಂತ್ರಸ್ತ ರೈತರು ಮಣ್ಣು ಕುಸಿದಿರುವ ಬಗ್ಗೆ ಸಹಾಯಕ ಇಂಜಿನಿಯರ್ ಅವರ ಗಮನಕ್ಕೆ ತಂದಿದ್ದಾರೆ.