ಬಂಟ್ವಾಳ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ವತಿಯಿಂದ ೧೬ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮಾ.೨೪ ರಂದು ಆದಿತ್ಯವಾರ ೧೧.೨೧ ರ ವೃಷಭ ಲಗ್ನದ ಸುಮುಹೂರ್ತದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದರು.
ಮುಂಬಯಿ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ ಯವರ ಸಾರಥ್ಯದಲ್ಲಿ ೧೬ನೇ ವರ್ಷದ ಸಾಮೂಹಿಕ ವಿವಾಹ ನಡೆಯಲಿದ್ದು ನಡೆಯಲಿದ್ದು ವಿವಾಹ ಅಪೇಕ್ಷಿತ ವಧು ವರರು ಫೆ. ೨೦ ರ ಒಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ಸುದ್ದಿಗೋಷ್ಟಿಯ ಮೂಲಕ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಕ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಮಾ.೧೭ ರಂದು ವಿವಾಹದ ಪೂರ್ವಭಾವಿಯಾಗಿ ನೊಂದಾಯಿತ ಜೋಡಿಗಳಿಗೆ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯಲಿದೆ ಎಂದ ಅವರು ಮೊದಲ ವರ್ಷ ೭೯ ಜೋಡಿ ಸಾಮೂಹಿಕ ವಿವಾಹದಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು ಕಳೆದ ೧೫ ವರ್ಷಗಳಲ್ಲಿ ಒಟ್ಟು ೪೬೩ ಜೋಡಿಗೆ ಮದುವೆ ನಡೆದಿದೆ ಎಂದರು. ಕಾರ್ಯಕ್ರಮದಲ್ಲಿ ೫ ಮಂದಿ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ ಮತ್ತು ಸಂಚಾಲಕ ರಾಜೇಶ್ ಪುಂಜಾಲಕಟ್ಟೆ, ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.