ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಮೇನಾಡು ಎಂಬಲ್ಲಿ ಜ. 11 ರಂದು ಮುಂಜಾನೆ ನಡೆದ ಚಿನ್ನಾಭರಣಗಳನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ್ ಶೆಟ್ಟಿ (21) ಮಂಗಳೂರು, ಐಕಳ ಗ್ರಾಮದ ರಾಕೇಶ್ ಎಲ್. ಪಿಂಟೋ (29), ಕಡಬ ಬೆಳಂದೂರು ಗ್ರಾಮದ ಎಂ.ಸೀತಾರಾಮ ಯಾನೆ ಪ್ರವೀಣ್ (36), ಸುಧೀರ್ (29) ಹಾಗೂ ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದ ಮೂಲತ: ಬಂಟ್ವಾಳ ತಾಲೂಕಿನ, ಇರಾ ಗ್ರಾಮದವನಾದ ಪ್ರಸ್ತುತ ಗೌರಿ ಕಾಲುವೆ, ಚಿಕ್ಕಮಗಳೂರು ಜಿಲ್ಲೆ ವಾಸಿ ಮಹಮ್ಮದ್ ಹನೀಫ್ (49) ಎಬವರುಗಳನ್ನು ಬಂಧಿಸಲಾಗಿದ್ದು ಆರೋಪಿಗಳಿಂದ ರೂ.3.15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದರೋಡೆಗೆ ಬಳಸಿದ ಅಂದಾಜು ರೂ. 8 ಲಕ್ಷ ಮೌಲ್ಯದ ಇನ್ನೋವಾ ಕಾರು ಹಾಗು ಅಂದಾಜು ರೂ. 2 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರು ವಶಪಡಿಸಿಕೊಂಡಿದ್ದಾರೆ.
ಮನೆಯಲ್ಲಿ ಇಬ್ಬರು ಮಹಿಳೆಯರು ಇರುವುದನ್ನು ಖಾತ್ರಿಪಡಿಸಿ ಆರೋಪಿಗಳು ಮುಂಜಾನೆ ಮನೆಯ ಕಾಲಿಂಗ್ ಬೆಲ್ ಒತ್ತಿ ಒಳಪ್ರವೇಶಿಸಿ ಮನೆಯವರನ್ನು ಬೆದರಿಸಿ ಚಿನ್ನಾಭರಣ ದರೋಡೆಗೈದಿದ್ದರು.
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಧರ್ಮಪ್ಪ, ಮತ್ತು ರಾಜೇಂದ್ರ, ಅವರ ಮುಂದಾಳತ್ವದಲ್ಲಿ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಎಸ್. ವಿಜಯಪ್ರಸಾದ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ನಿರೀಕ್ಷಕ ಶಿವಕುಮಾರ ಬಿ, ಪುಂಜಾಲಕಟ್ಟೆ ಎಸೈ ನಂದಕುಮಾರ್, ಗ್ರಾಮಾಂತರ ಎಸೈ ಹರೀಶ್ ನೇತೃತ್ವದಲ್ಲಿ 3 ವಿಶೇಷ ಪತ್ತೆ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿತ್ತು. ತನಿಖಾ ತಂಡದಲ್ಲಿ ಎ.ಎಸ್.ಐ. ಗಿರೀಶ್, ಹೆಚ್.ಸಿ. ಗಳಾದ ಸುಜು, ರಾಧಾಕೃಷ್ಣ, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್, ಸಂದೀಪ್, ರಾಹುಲ್, ಇರ್ಷಾದ್, ರಾಜೇಶ್, ಹರಿಶ್ಚಂದ್ರ, ಪಿ.ಸಿ.ಗಳಾದ ಪುನೀತ್, ರಮ್ಜಾನ್, ಯೊಗೇಶ್ ಡಿ.ಎಲ್, ಕುಮಾರ್ ಹೆಚ್. ಕೆ., ವಿನಾಯಕ ಬಾರ್ಕಿ, ಜಗದೀಶ ಅತ್ತಾಜೆ, ಜಮೀರ್ ಕಲಾರಿ, ಎ.ಹೆಚ್.ಸಿ.ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್, ಸಂಪತ್ ರವರುಗಳು ಕಾರ್ಯನಿರ್ವಹಿಸಿರುತ್ತಾರೆ.
ಸದ್ರಿ ಆರೋಪಿಗಳ ಪೈಕಿ ಗಣೇಶ ನಾಯ್ಕ ಎಂಬಾತನು 2023ನೇ ಸಾಲಿನಲ್ಲಿ ಮಂಗಳೂರು ನಗರ ವ್ಯಾಪ್ತಿಯ ಮುಲ್ಕಿಯಲ್ಲಿ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಮುಖ್ಯ ಆರೋಪಿಯಾಗಿದ್ದು, ಉಳಿದಂತೆ ಸೀತಾರಾಮ ಯಾನೆ ಪ್ರವೀಣ್, ಸುಧೀರ್ ಹಾಗು ಮಹಮ್ಮದ್ ಹನೀಫ್ ರವರ ವಿರುದ್ದ ದ.ಕ.ಜಿಲ್ಲೆ ಹಾಗು ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.
ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿರುತ್ತದೆ.