ಬಂಟ್ವಾಳ: ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕ ನಿರ್ವಹಿಸುವ ಬಂಟ್ವಾಳ ತಾಲೂಕು 17ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕಡೇಶಿವಾಲಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ಡಿ.12 ರಂದು ನಡೆಸಲಾಗುವುದು. ಸಮ್ಮೇಳನದಲ್ಲಿ ತಾಲೂಕಿನ ೧೮ ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಭಾಗವಹಿಸಲಿದ್ದಾರೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸಾನ್ವಿ ಸುವರ್ಣ ಆಯ್ಕೆಯಾಗಿರುತ್ತಾರೆ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ. ಬಾಯಾರು ತಿಳಿಸಿದ್ದಾರೆ.
ಸಾನ್ವಿಯವರು ಸುಂದರ ಪೂಜಾರಿ ವಿಶಾಲಾಕ್ಷಿ ದಂಪತಿಗಳ ಪುತ್ರಿ. ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬಾಲ ಪ್ರತಿಭೆ. ಎಳೆಯ ವಯಸ್ಸಿನಲ್ಲೇ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಭಾರತ ಸರಕಾರದ ಶಿಕ್ಷಣ ಸಚಿವಾಲಯದಿಂದ ವೀರ ಗಾಥಾ ಪ್ರಮಾಣ ಪತ್ರ ಪಡೆದಿರುವರು. ಸಶಸ್ತ್ರ ಪಡೆಗಳ ಶೂರರ ಸ್ಮರಣಾರ್ಥವಾಗಿ ಈ ಪ್ರಮಾಣ ಪತ್ರ ನೀಡಲಾಗಿದೆ.
ಭಾರತೀಯ ಜೀವವಿಮಾ ನಿಗಮ ನೀಡುವ ಸಾಧನಾ ಪ್ರಶಸ್ತಿಯನ್ನು ಪಡೆದ ಇವರು ಉತ್ತಮ ಮಾತುಗಾರರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ, ಫೊಟೋಗ್ರಾಫಿ, ನೃತ್ಯ, ಬರವಣಿಗೆ, ಚಿತ್ರ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ