ಬಂಟ್ವಾಳ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡು ಶತಮಾನ ಪೂರೈಸಿರುವ ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯಲ್ಲಿ ಘನವಾಹನಗಳ ಸಂಚಾರ ನಿಷೇಧಿಸುವ ಉದ್ದೇಶದಿಂದ ಮೇಲ್ಭಾಗಕ್ಕೆ ಹಾಕಿರುವ ತಡೆಬೇಲಿ ಒಂದೇ ದಿನದಲ್ಲಿ ಕಿತ್ತು ಬಿದ್ದಿದೆ. ಶುಕ್ರವಾರ ಸೇತುವೆಯ ಎರಡೂ ಬದಿಗಳಲ್ಲೂ ಕಬ್ಬಿಣದ ತಡೆಬೇಲಿ ಅಳವಾಡಿಸಲಾಗಿತ್ತು.
ಶನಿವಾರ ಬೆಳಿಗ್ಗೆ ಸರಕು ಸಾಗಿಸುವ ಗೂಡ್ಸ್ ಟೆಂಪೊವೊಂದು ತಡೆಬೇಲಿಯ ಅರಿವಿಲ್ಲದೆ ಸಂಚರಿಸಿದ ಕಾರಣ ಒಂದು ಪಾರ್ಶ್ವದ ಕಬ್ಬಿಣದ ಬೀಮ್ ಕೆಳಕ್ಕುರುಳಿದೆ.
ಕಳೆದ ಕೆಲ ದಿನಗಳ ಹಿಂದೆ ಪಾಣೆಮಂಗಳೂರಿನ ಉಕ್ಕಿನ ಸೇತುವೆಯಲ್ಲಿ ಡಾಮರು ಕಿತ್ತು ಹೋಗಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹಬ್ಬಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಸಹಿತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘನವಾಹನಗಳ ಸಂಚಾರದಿಂದ ಬಿರುಕು ಕಾಣಿಸಿದೆ ಎನ್ನುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದ ಹಿನ್ನಲೆಯಲ್ಲಿ
ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಸೇತುವೆಯ ಮೇಲ್ಬಾಗದಲ್ಲಿ ಅಡ್ಡಲಾಗಿ ತಡೆಬೇಲಿಯನ್ನು ಅಳವಡಿಸಲು ತೀರ್ಮಾನಿಸಲಾಗಿತ್ತು. ಸೇತುವೆಯ ಸುರಕ್ಷತೆಯ ದೃಷ್ಟಿಯಿಂದ ಇನ್ನು ಮುಂದೆ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳ ಸಂಚಾರಕ್ಕೆ ಮಾತ್ರ ಅವಕಾಶ ಇದ್ದು ಘನ ವಾಹನಗಳ ಸಂಚಾರ ನಿರ್ಬಂದಿಸಲು ತಡೆಬೇಲಿ ಅಳವಡಿಸಲಾಗಿತ್ತು.