ಬಂಟ್ವಾಳ: ಪ್ರಾದೇಶಿಕವಾರು ಜಾತಿ ವಿಂಗಡನೆಯಲ್ಲಿ ನಾವು ಸೋತಿದ್ದೇವೆ. ವಿಶ್ವದಲ್ಲಿ ನಾವು ಗರಿಷ್ಠ ಸಂಖ್ಯೆಯಲ್ಲಿದ್ದರೂ ಜಾತಿಗಣತಿಯಲ್ಲಿ ನಾವು ಕನಿಷ್ಟರಾಗಿದ್ದೇವೆ ಅದಕ್ಕೆ ಕಾರಣ ನಮ್ಮ ಕುಲ ಕಸುಬು ಒಂದೇ ಆಗಿದ್ದರೂ ಬೇರೆ ಬೇರೆ ಜಾತಿ ಹೆಸರಲ್ಲಿ ನಮ್ಮ ಕುಲ ಬೇರ್ಪಡಿಸಿದೆ, ನಮ್ಮ ಒಗ್ಗಟ್ಟಿನ ಶಕ್ತಿ ಇನ್ನೂ ಹೆಚ್ಚ ಬೇಕು ಎಂದು ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಬಿ.ಸಿ.ರೋಡು ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಕುಲಾಲ- ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ೨೦೨೩-೨೫ ರ ಸಾಲಿನ ನೂತನ ಆಡಳಿತ ಸಮಿತಿಯ ಪದ ಪ್ರದಾನ, ನೂತನ ಕಛೇರಿಯ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ಒಸರ್ದ ಕಂಡೊಡು ಕೆಸರ್ದ ಗೊಬ್ಬುಲು ಎನ್ನುವ ಕೆಸರುಗದ್ದೆ ಪಂದ್ಯಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಮುಳಿಯ ಶ್ರೀ ವೈಷ್ಣವಿ ಆದಿಶಕ್ತಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದ ಸಂಘಟನೆಗಳು ದುಂದುವೆಚ್ಚವನ್ನು ಬಿಟ್ಟು ಸಾಮೂಹಿಕ ಮದುವೆಯ ಮೂಲಕ ಸಮುದಾಯದ ಬಡ ಹೆಣ್ಮಕ್ಕಳ ಮತ್ತು ಅವರ ಹೆತ್ತವರ ಕಣ್ಣೀರು ಒರಸುವ ಕೆಲಸ ಮಾಡಿ ಪುಣ್ಯ ಸಂಪಾದಿಸಬೇಕು ಎಂದರು.
ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿ ಉಪಸ್ಥಿತಿ ಇದ್ದು ಕ್ರಷಿ ಪ್ರಧಾನ ಈ ಭೂ ನೆಲದಲ್ಲಿ ಆಧುನಿಕ ಅವಿಷ್ಕಾರಗಳು ವಿಜ್ರಂಭಿಸಿದರೂ ಮಣ್ಣಿನ ಅಂತರ್ ಸತ್ವವನ್ನು ಆಸ್ವಾದಿಸುವುದು, ಕೆಸರ ಗದ್ದೆಯಲ್ಲಿ ಮನೋರಂಜನೆಯ ಮೂಲಕ ಮಕ್ಕಳಾದಿಯಾಗಿ ಹಿರಿಯರ ವರೆಗೆ ಆಟ ಪಂದ್ಯಾಟದ ಮೂಲಕ ನಲಿಯುವುದು ಒಂದು ಅವಕಾಶ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದ.ಭಾ.ಕುಂಬಾರ ಫೆಡರೇಷನ್ ನ ಅಧ್ಯಕ್ಷ ಡಾ. ಶಿವಕುಮಾರ್ ಚೌಡಶೆಟ್ಟಿ. ಕ.ರಾ.ಕು.ಕುಂ. ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಬೆಂಗಳೂರಿನ ಉದ್ಯಮಿಗಳಾದ ಕೇಶವ ಬಾಳೆಹಿತ್ಲು. ರಮೇಶ್ ಬಾಳೆಹಿತ್ಲು, ಯುವ ವೇದಿಕೆಯ ರಾಜ್ಯಾಧ್ಯಕ್ಷ ಗಂಗಾಧರ್ ಬಂಜನ್, ವಿಭಾಗೀಯ ಕಾರ್ಯದರ್ಶಿ ಅನಿಲ್ ದಾಸ್, ರಾಜ್ಯ ಕಾರ್ಯದರ್ಶಿ ಜಯೇಶ್ ಗೋವಿಂದ್, ಹಾಗೂ ರಾಜ್ಯದ ಪಧಾದಿಕಾರಿಗಳು ಊರ ಮತ್ತು ಪರವೂರ ಸಂಘಟನೆಯ ನಾಯಕರು, ಉದ್ಯಮಿಗಳು, ಸಾಧಕರು ಭಾಗವಹಿಸಿದ್ದರು.
ಆರಂಭದಲ್ಲಿ ಯತಿವರ್ಯರನ್ನು ಗಣ್ಯ ಅತಿಥಿಗಳನ್ನು ಬಿ.ಸಿ.ರೋಡು ಮುಖ್ಯ ವ್ರತ್ತದಲ್ಲಿ ಸ್ವಾಗತಿಸಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ನೂತನ ಕಛೇರಿಯನ್ನು ಯತಿತ್ರಯರು ಉದ್ಘಾಟಿಸಿದರು. ಪದ ಪ್ರದಾನ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸಂತೋಷ್ ಮರ್ತಾಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಿತೀಶ್ ಕುಲಾಲ್ ಪಲ್ಲಿಕಂಡ ಇವರಿಗೆ ಅಧಿಕಾರ ಹಸ್ತಾಂತರಿಸಿದರು, ಅದೇ ರೀತಿ ಪಧಾಧಿಕಾರಿಗಳ ಅಧಿಕಾರ ಸ್ವೀಕಾರ ನಡೆಯಿತು. ನೂತನ ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆ ವಿಜಯಶ್ರೀ ವೇದಿಕೆಯಲ್ಲಿದ್ದರು. ಈ ಸಾಲಿನ ಸರ್ವಜ್ಞ ಪ್ರಶಸ್ತಿಯನ್ನು ಸಾಮಾಜಿಕ ಸೇವೆಯಲ್ಲಿ ಸದಾಶಿವ ವಗ್ಗ, ಕುಂಬಾರಿಕೆಯಲ್ಲಿ ಮಾದಪ್ಪ ಮೂಲ್ಯ ನೆಲ್ಲಿ, ಧಾರ್ಮಿಕ ರಂಗದಲ್ಲಿ ಉದ್ಯಮಿ ನಾಗೇಶ್ ಕುಲಾಲ್, ಉದ್ಯಮ ಕ್ಷೇತ್ರದಲ್ಲಿ ತೇಜಸ್ವಿ ರಾಜ್, ಸಂಘಟನೆಯಲ್ಲಿ ಟಿ.ಶೇಷಪ್ಪ ಮೂಲ್ಯ ಅವರಿಗೆ ನೀಡಲಾಯಿತು.
ಮಾಜಿ ಅಧ್ಯಕ್ಷ ಸಂತೋಷ್ ಮರ್ತಾಜೆಯವರನ್ನು ಗತ ವರ್ಷದ ಅಧ್ಯಕ್ಷೀಯ ಸೇವೆಗಾಗಿ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ ಸ್ವಾಗತಿಸಿ, ಕಾರ್ಯದರ್ಶಿ ಕಾರ್ತಿಕ್ ಮೈಯರಬೈಲು ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.