ಬಂಟ್ವಾಳ: ಹಣಕಾಸಿನ ತೊಂದರೆಯಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದೇ ಅರ್ಧದಲ್ಲೇ ಬಾಕಿ ಉಳಿದಿದ್ದ ಬಡ ಮಹಿಳೆಯ ಮನೆ ನಿರ್ಮಾಣದ ಕೆಲಸವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್ ನಗರ ಸಜೀಪಮೂಡ ಇದರ ಬೊಳ್ಳಾಯಿ ಉಪ ಸಮಿತಿ ಪೂರ್ಣಗೊಳಿಸಿ ಮಾನವೀಯತೆ ಮೆರೆದಿದೆ. ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹಪ್ರವೇಶ ಮಾಡಿ ಗಣ್ಯರ ಉಪಸ್ಥಿತಿಯಲ್ಲಿ ಮನೆಯನ್ನು ಮನೆಯೊಡತಿಗೆ ಹಸ್ತಾಂತರಿಸಿದೆ.
ಸಜೀಪಮೂಡ ಗ್ರಾಮದ ನಿವಾಸಿ ವಿಮಲ ಎಂಬವರ ಪತಿ ಎರಡೂವರೆ ವರ್ಷಗಳ ಹಿಂದೆ ನಿಧನರಾಗಿದ್ದರು. ಕೂಲಿ ಕೆಲಸ ಮಾಡಿ ತನ್ನೋರ್ವ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ಬಡತನದಲ್ಲಿ ಜೀವನ ನಡೆಸುತ್ತಿದ್ದ ಅವರು ಸ್ವಂತ ಸೂರು ನಿರ್ಮಿಸಬೇಕು ಎನ್ನುವ ಕನಸಿನೊಂದಿಗೆ ಮಿತ್ತಮಜಲು ಬಳಿಯ ನೈಪಾಡಿ ಎಂಬಲ್ಲಿ ೩ ಸೆಂಟ್ಸ್ ಜಮೀನು ಖರೀದಿಸಿ ಸ್ಥಳೀಯ ಪಂಚಾಯತಿ ಮುಖಾಂತರ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮುಂದಾಗಿದ್ದರು. ಆದರೆ ಹಣಕಾಸಿನ ಅಡಚಣೆಯಂದ ಮನೆ ಪೂರ್ಣಗೊಳಿಸಲು ಸಾಧ್ಯವಾಗದೆ ಪರಿತಪಿಸಬೇಕಾಯಿತು. ಈ ಬಗ್ಗೆ ಮಾಹಿತಿ ಪಡೆದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್ ನಗರ ಸಜೀಪಮೂಡ ಇದರ ಬೊಳ್ಳಾಯಿ ಉಪ ಸಮಿತಿಯ ಅಧ್ಯಕ್ಷ ಉಮೇಶ್ ಸುವರ್ಣ ಪಟ್ಟುಗುಡ್ಡೆ ಇವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಮನೆ ಪರಿಶೀಲಿಸಿ ಪೂರ್ಣಗೊಳಿಸುವ ಭರವಸೆ ನೀಡಿದರು. ಕೇವಲ ಎರಡು ತಿಂಗಳ ಕಾಲಾವಕಾಶದಲ್ಲಿ ನಿರಂತರ ಶ್ರಮದಾನದ ಮೂಲಕ ಮನೆಯ ಕೆಲಸವನ್ನು ಪೂರ್ಣಗೊಳಿಸಿ ಬಡ ಮಹಿಳೆಯ ಬಾಳಿಗೆ ಬೆಳಕು ನೀಡಿದ್ದಾರೆ.
ಗೃಹಪ್ರವೇಶ, ಶೈಕ್ಷಣಿಕ ದತ್ತು ಸ್ವೀಕಾರ:
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್ ನಗರ ಸಜೀಪಮೂಡ ಇದರ ಬೊಳ್ಳಾಯಿ ಉಪ ಸಮಿತಿಯ ಸಹಕಾರದೊಂದಿಗೆ ನಿರ್ಮಾಣಗೊಂಡ ಬ್ರಹ್ಮಶ್ರೀ ಮನೆಯ ಗ್ರಹಪ್ರವೇಶ ಸೋಮವಾರ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ನೀಡುವ ಮೂಲಕ ವಿಮಲ ಅವರಿಗೆ ಮನೆಯನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮೂಲಕ ವಿಮಲ ಅವರ ಮಗಳು ಪೃಥ್ವಿ ಅವರನ್ನು ಶೈಕ್ಷಣಿಕ ದತ್ತು ಸ್ವೀಕರಿಸಲಾಯಿತು. ಆಕೆಯ ಉನ್ನತ ವ್ಯಾಸಂಗದವರೆಗಿನ ಜವಬ್ದಾರಿ ಯನ್ನು ಸಂಘ ವಹಿಸಿಕೊಳ್ಳುವುದಾಗಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಘೋಷಿಸಿದರು. ಈ ಸಂದರ್ಭ ಮನೆ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಬೊಳ್ಳಾಯಿ ಉಪ ಸಮಿತಿಯ ಅಧ್ಯಕ್ಷ ಉಮೇಶ್ ಸುವರ್ಣ ಪಟ್ಟುಗುಡ್ಡೆ ಅವರನ್ನು ಸನ್ಮಾನಿಸಲಾಯಿತು. ಮನೆ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸಜೀಪಮೂಡ ಇದರ ಗೌರವಾಧ್ಯಕ್ಷ ಕೆ. ಸಂಜೀವ ಪೂಜಾರಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್ ನಗರ ಸಜೀಪಮೂಡ ಇದರ ಬೊಳ್ಳಾಯಿ ಉಪ ಸಮಿತಿಯ ಕಾರ್ಯ ಮಾದರಿಯಾದುದು. ವಿಮಲ ಅವರ ಮಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಿ ಉನ್ನತ ಶಿಕ್ಷಣ ಪಡೆಯುವವರೆಗೂ ಎಲ್ಲಾ ಖರ್ಚು, ವೆಚ್ಚವನ್ನು ಸಂಘ ಬರಿಸಲಿದೆ. ಆಕೆ ಇಂಜಿನಿಯರ್ ಅಥವಾ ವೈದ್ಯೆ ಆಗಬೇಕೆನ್ನುವುದು ನಮ್ಮ ಆಸೆ. ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲಿದ್ದೇವೆ ಎಂದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಮಾತನಾಡಿ, ಬೊಳ್ಳಾಯಿ ಉಪಸಮಿತಿಯ ಸದಸ್ಯರು ಶ್ರಮದಾನದ ಮೂಲಕ ಸುಂದರವಾದ ಮನೆಯನ್ನು ನಿರ್ಮಿಸಿಕೊಟ್ಟಿರುವುದು ಸಂತಸ ತಂದಿದೆ. ಇದೊಂದು ಅಭಿನಂದನೀಯ ಕಾರ್ಯ ಎಂದರು. ಬಂಟ್ವಾಳ ತಾಲೂಕು ಯುವವಾಹಿನಿ ಅಧ್ಯಕ್ಷ ಹರೀಶ್ ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸಜೀಪಮೂಡ ಇದರ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ತಾ.ಪಂ. ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಅರ್ಚಕ ವೆಂಕಟೇಶ ಶಾಂತಿ ಶುಭಹಾರೈಸಿದರು. ಯುವವಾಹಿನಿ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಬೋಳಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ರತ್ನಾಕರ ಪೂಜಾರಿ ನಾಡಾರ್, ರಮೇಶ್ ಅನ್ನಪ್ಪಾಡಿ, ಜಯಶಂಕರ್ ಕಾನ್ಸಲೆ, ವಿಶ್ವನಾಥ ಬೆಳ್ಚಾಡ, ಕಾಐನಿರ್ವಾಹಣಾಧಿಕಾರಿ ಮಮತಾ ಜಿ., ಬೊಳ್ಳಾಯಿ ಉಪ ಸಮಿತಿಯ ಸದಸ್ಯರು, ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಪ್ರಶಾಂತ್ ಪೂಜಾರಿ ವಿಟ್ಲಕೋಡಿ ಸ್ವಾಗತಿಸಿದರು. ಮೋಹನದಾಸ್ ಪೂಜಾರಿ ಕುಚ್ಚಿಗುಡ್ಡೆ ಪ್ರಾಸ್ತವಿಕವಾಗಿ ಮಾತನಾಡಿದರು. ಸುರೇಶ್ ಪೂಜಾರಿ ನಗ್ರಿ ಕಾರ್ಯಕ್ರಮ ನಿರೂಪಿಸಿದರು.