ಬಂಟ್ವಾಳ: ನಾಗರಹಾವಿನ ಹೊಟ್ಟೆ ಸೇರಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದು 15 ದಿನಗಳ ಆರೈಕೆಯ ಬಳಿಕ ಯಶಸ್ವಿಯಾಗಿ ಅರಣ್ಯ ಬಿಡಲಾಗಿದೆ. ಉರಗ ತಜ್ಞ ಸ್ನೇಕ್ ಕಿರಣ್ ಹಾಗೂ ಪಶುವೈದ್ಯ ಡಾ. ಯಶಸ್ವಿ ನಾರಾವಿ ಹಾಗೂ ಅರಣ್ಯ ಇಲಾಖೆಯ ಸಕಾಲಿಕ ಕಾರ್ಯಚರಣೆಯಿಂದ ಪಾಣ ಸಂಕಟದಲ್ಲಿ ನರಳುತ್ತಿದ್ದ ನಾಗರ ಹಾವು ಬದುಕುಳಿದಿದೆ.
ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ವಗ್ಗದಲ್ಲಿರುವ ಸಾಲು ಮರ ತಿಮ್ಮಕ್ಕ ಉದ್ಯಾನವನ ಸಮೀಪದಲ್ಲಿರುವ ಕಾವಳಪಡೂರು ಗ್ರಾ,.ಪಂ. ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿಯ ಬಿಲವೊಂದರಲ್ಲಿ ಒಳನುಗ್ಗಿದ ನಾಗರ ಹಾವು ಹೊರಬರಲಾಗದೆ ಒದ್ದಾಡುತ್ತಿತ್ತು. ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಕಳೆದ ಜೂ. 6ರಂದು ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ ಅವರು ಹಾವನ್ನು ಬಿಲದಿಂದ ಹೊರ ತೆಗೆದು ಮೂರು ದಿನಗಳ ಕಾಲ ಪ್ರಾಥಮಿಕ ಆರೈಕೆ ನೀಡಿ ರಕ್ಷಿಸಿದ್ದಾರೆ.
ಹಾವಿನ ತಲೆ ಭಾಗದಲ್ಲಿ ಗಾಯಗಳಾಗಿರುವುದು ಹಾಗೂ ಚರ್ಮ ಹರಿದಿರುವುದನ್ನು ಗಮನಿಸಿ ಮಂಗಳೂರಿನ ಪಶುವೈದ್ಯ ಯಶಸ್ವಿ ನಾರವಿ ಅವರ ಬಳಿ ತಂದಿದ್ದಾರೆ. ಗಾಯಕ್ಕೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾವಿನ ಹೊಟ್ಟೆ ಉಬ್ಬೇರಿರುವುದನ್ನು ಕಂಡು ಎಕ್ಸರೇ ತೆಗೆದಿದ್ದಾರೆ. ಈ ಸಂದರ್ಭ ಹಾವಿನ ಹೊಟ್ಟೆಯೊಳಗೆ ಪ್ಲಾಸ್ಟಿಕ್ ವಸ್ತು ಇರುವುದು ಗಮನಕ್ಕೆ ಬಂದಿದೆ. ತಕ್ಷಣ ಹಾವಿನ ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆ ಸೇರಿದ್ದ ಪ್ಲಾಸ್ಟಿಕ್ ಡಬ್ಬವನ್ನು ವೈದ್ಯರು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ೧೫ ದಿನಗಳ ಕಾಲ ಆರೈಕೆ ಮಾಡಿ ಹಾವು ಚೇತರಿಸಿಕೊಂಡ ಬಳಿಕ ಸ್ನೇಕ್ ಕಿರಣ್ ಅವರು ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಜೂ. 19 ರಂದು ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.