ಬಂಟ್ವಾಳ: ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್ ಹಾಗೂ ಕಾಂಗ್ರೆಸ್ನ ಬಿ. ರಮನಾಥ ರೈ ಮಧ್ಯೆ ನಡೆದ ಪ್ರಬಲ ಸ್ಪರ್ಧೆಯಲ್ಲಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ೮೨೮೨ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆರಂಭಿಕ ಹಂತದ ಅಂಚೆ ಮತದಾನದಲ್ಲಿ ಮಾತ್ರ ರಮಾನಾಥ ರೈ ಮುನ್ನಡೆಯನ್ನು ಸಾಧಿಸಿದ್ದರೆ, ಬಳಿಕ ರಾಜೇಶ್ ನಾಯ್ಕ ಅವರು ಕೊನೆಯ ಹಂತದವರೆಗೂ ಮುನ್ನಡೆಯನ್ನು ಸಾಧಿಸಿ ಗೆಲುವಿನ ನಗೆ ಬೀರಿದ್ದಾರೆ. ಆ ಮೂಲಕ ಎರಡನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
ಒಟ್ಟು ಚಲಾಯಿತ ಮತಗಳು ೧,೮೩,೪೨೮, ರಾಜೇಶ್ ನಾಕ್ ೯೩,೩೨೪( ಬಿಜೆಪಿ), ರಮಾನಾಥ ರೈ(ಕಾಂಗ್ರೆಸ್) ೮೫,೦೪೨. ಪ್ರಕಾಶ್ ಗೋಮ್ಸ್ (ಜೆಡಿಎಸ್) ೪೫೪, ಪುರುಷೋತ್ತಮ ಕೋಲ್ಪೆ (ಆಮ್ ಆದ್ಮಿ) ೪೯೫, ಇಲಿಯಾಸ್ ಮಹಮ್ಮದ್ ತುಂಬೆ (ಎಸ್.ಡಿ.ಪಿಐ) ೫೪೩೬, ನೋಟಾ ೮೨೧ ಗಮನಿಸಬೇಕಾದ ಅಂಶವಾಗಿದೆ. ಹಾಲಿ ಶಾಸಕ ರಾಜೇಶ್ ನಾಯ್ಕ ಅವರ ಗೆಲುವಿನ ಅಂತರ ೮೨೮೨ ಅಗಿದ್ದು, ಶೇಕಡಾವಾರು ೫೦.೨೯ ಮತಗಳಿಸಿ ಜಯ ಸಾಧಿಸಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಚುನಾವಣೆ ಘೋಷಣೆಗೆ ಮುನ್ನ ಹಾಗೂ ತಮ್ಮ ಚುನಾವಣಾ ಪ್ರಚಾರದುದ್ದಕ್ಕೂ ಇದು ತನ್ನ ಕೊನೆಯ ಚುನಾವಣೆ ಎಂದು ಭಾವನಾತ್ಮಕವಾಗಿ ಹೇಳಿ ಅನುಕಂಪಗಿಟ್ಟಿಸಿದರೂ, ತನ್ನ ಒಂಭತ್ತನೇ ಸ್ಪರ್ಧೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ.
ಒಟ್ಟು ೬ ಬಾರಿ ಶಾಸಕರಾಗಿದ್ದ ರಮಾನಾಥ ರೈ ಅವರು ಮೂರು ಬಾರಿ ಸೋಲು ಅನುಭವಿಸಿದ್ದಾರೆ. ವಿಧಾನಸಭೆಗೆ ಮೂರು ಬಾರಿ ರಮಾನಾಥ ರೈ ವಿರುದ್ಧ ಸ್ಪರ್ಧಿಸಿ, ಮೊದಲ ಬಾರಿ ಸೋತರೂ ಬಳಿಕ ಸತತ ಎರಡನೇ ಬಾರಿ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಅವರು ಗೆಲುವು ಸಾಧಿಸಿದ್ದಾರೆ.
೨೦೧೫ರಲ್ಲಿ ಸೋಲು ಕಂಡರೂ ಮತ್ತೆ ೨೦೧೮ರಲ್ಲಿ ಸ್ಪರ್ಧಿಸಿದ್ದ ರಾಜೇಶ್ ನಾಯ್ಕ್ ೧೫,೯೭೧ ಮತಗಳ ಅಂತರದಿಂದ ಗೆದ್ದಿದ್ದರು. ಬಳಿಕ ಶಾಸಕರಾಗಿ ೨ ಸಾವಿರ ಕೋಟಿಗೂ ಕೋಟಿಗೂ ಮಿಕ್ಕಿ ಅನುದಾನ ತರಿಸಿ ಅಭಿವೃದ್ಧಿ ಕಾರ್ಯ ನಡೆಸಿದ್ದರು, ೨೦೨೩ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆಯಾದರೂ ಗೆಲುವಿನ ಅಂತರ ಕಡಿಮೆಯಾಗಿದೆ.
ಒಡ್ಡೂರಿನ ತನ್ನ ಮನೆಯಲ್ಲೇ ಕುಳಿತು ಫಲಿತಾಂಶ ವೀಕ್ಷಿಸುತ್ತಿದ್ದ ರಾಜೇಶ್ ನಾಯ್ಕ್ ಅವರು ತಮ್ಮ ಗೆಲುವಿನ ಘೋಷಣೆಯಾಗುತ್ತಿದ್ದಂತೆ ಒಡ್ಡೂರು ಧರ್ಮಚಾವಡಿಯಲ್ಲಿರುವ ಧರ್ಮದೈವ ಶ್ರೀ ಕೊಡಮಣಿತ್ತಾಯ ದೈವಕ್ಕೆ ಪ್ರಾರ್ಥನೆ ಸಲ್ಲಿಸಿ ಸುರತ್ಕಲ್ ಎನ್.ಐ.ಟಿ.ಕೆ ಮತ ಎಣಿಕೆ ಕೇಂದ್ರಕ್ಕೆ ತೆರಳಿದರು. ಪ್ರಮಾಣ ಪತ್ರ ಸ್ವೀಕರಿಸಿ, ಪಕ್ಷದ ಜಿಲ್ಲಾ ಕಚೇರಿಗೆ ತೆರಳಿ ಬಳಿಕ ಅಲ್ಲಿಂದ ನೇರ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನಕ್ಕಾಗಮಿಸಿ ಪ್ರಾರ್ಥನೆ ಸಲ್ಲಿಸಿದರು.
ಪೊಳಲಿಯಿಂದ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಗಾಗಮಿಸಿ ಕಾರ್ಯಕರ್ತರು, ಪ್ರಮುಖರ ಜೊತೆ ಗೆಲುವಿನ ಸಂಭ್ರಮಾಚರಿಸಿದರು.