ಬಂಟ್ವಾಳ : ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದ.ಕ ಜಿಲ್ಲಾ ಸಮಿತಿ ಸಭೆ ಬಿ.ಸಿ.ರೋಡಿ ನಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಎ.ಐ.ಸಿ.ಸಿ.ಟಿ.ಯು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಿ.ಪಿ.ಐ.ಎಂ.ಎಲ್ (ಲಿಬರೇಷನ್ ) ಕೇಂದ್ರ ಸಮಿತಿ ಸದಸ್ಯರಾದ ಕಾಮ್ರೇಡ್ ಶಂಕರ್ ಮಾತನಾಡಿ
ಇಂದು ಕಾರ್ಮಿಕ ವರ್ಗ ಅತ್ಯಂತ ಸಂಕಷ್ಟದ ಪರಿಸ್ಥಿತಿ ಯಲ್ಲಿ ಇದ್ದು ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿ ಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ ,ಇಂದೆಂದೂ ಇಲ್ಲ ದಂತಹ ಭ್ರಷ್ಟಾಚಾರ,ಬೆಲೆ ಏರಿಕೆ, ಶೈಕ್ಷಣಿಕ ,ವೈದ್ಯಕೀಯ ಮೂಲ ಸೌಕರ್ಯಗಳ ನಾಶ, ಯುವಜನರ ಬದುಕಿಗೆ ಮಾರಕವಾಗಿರುವ ನಿರುದ್ಯೋಗ, ಮಹಿಳೆಯರ ಮೇಲೆ ,ಅಲ್ಪಸಂಖ್ಯಾತ ರ ಮೇಲಿನ ದಾಳಿ ಇವುಗಳಿಂದ ಜನತೆ ತತ್ತರಿಸಿದ್ದು ಈ ಪರಿಸ್ಥಿತಿ ತಂದ ರಾಜ್ಯ ಬಿ.ಜೆ.ಪಿ ಸರಕಾರವನ್ನು ಸೋಲಿಸಿ ಸಂವಿಧಾನ ಪ್ರಜಾಪ್ರಭುತ್ವ ವನ್ನು ಉಳಿಸಬೇಕೆಂದು ಕರೆ ನೀಡಿದರು. ಸಿ.ಪಿ.ಐ.ಎಂ.ಎಲ್ ಪಕ್ಷದಿಂದ ಕೋಮುವಾದ ಸೋಲಿಸಿ ಕರ್ನಾಟಕ ಉಳಿಸಿ ಪ್ರಜಾಪ್ರಭುತ್ವ ಸಂವಿದಾನ ರಕ್ಷಿಸಲು ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಅದ್ಯಕ್ಷರಾದ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಕೆ.ಇ.ಮೋಹನ್, ಮುಖಂಡರಾದ ಸತೀಶ್ ಕುಮಾರ್ ಮಂಗಳೂರು, ವಕೀಲರಾದ ತುಳಸೀದಾಸ್ ವಿಟ್ಲ ಮುಂತಾದವರು ಇದ್ದರು.