ಬಂಟ್ವಾಳ: ಪ್ರತೀ ವರ್ಷ ಬೇಸಿಗೆಯಲ್ಲಿ ಕಾಡುವ ನೀರಿನ ಬವಣೆಯಿಂದ ಮನೆಮಂದಿ ಪಡುವ ಸಂಕಷ್ಡವನ್ನು ತಾಳಲಾರದೆ ಬಾಲಕನೋರ್ವ ಏಕಾಂಕಿಯಾಗಿ ಬಾವಿ ತೋಡಿ ಅಚ್ಚರಿಸಿ ಮೂಡಿಸಿದ್ದಾನೆ. ಸುಮಾರು ೨೪ ಅಡಿ ಆಳದ ಬಾವಿಯನ್ನು ಯಾರ ಸಹಾಯವನ್ನು ಪಡೆಯದೇ ಹಾರೆ, ಪಿಕ್ಕಾಸಿನಿಂದ ತೋಡಿದ್ದು ಆತನ ಪ್ರಯತ್ನಕ್ಕೆ ಫಲವಾಗಿ ನೀರು ಸಿಕ್ಕಿದೆ!
ಬಂಟ್ವಾಳ ತಾಲೂಕಿನ ನಾಯಿಲ ಕಾಪಿಕಾಡು ನಿವಾಸಿ ಲೋಕನಾಥ ಹಾಗೂ ಮೋಹಿನಿ ದಂಪತಿಯ ಪುತ್ರ ಸೃಜನ್ ಬಾವಿ ತೋಡಿ ಜೀವ ಜಲ ಪಡೆದ ಆಧುನಿಕ ಭಗೀರಥ!
ಬಂಟ್ವಾಳ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿರುವ ಸೃಜನ್ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸೃಜನ್ ಅವರ ಮನೆಗೆ ಪಂಚಾಯತಿಯ ನಳ್ಳಿ ನೀರು ಆಸರೆಯಾಗಿದೆ. ಬೇಸಿಯಲ್ಲಿ ನೀರು ಬಂದರೆ ಬಂತು, ಇಲ್ಲದಿದ್ದರೆ ಪಕ್ಕದ ಮನೆಯ ಬಾವಿಯನ್ನು ಅವಲಂಬಿಸಬೇಕು. ಇದು ಪ್ರತೀ ವರ್ಷದ ಸಮಸ್ಯೆ. ಇದರಿಂದ ಬೇಸತ್ತ ಸೃಜನ್ ಮನೆಯ ಮುಂದೆ ತಾನು ಬಾವಿ ತೋಡುವುದಾಗಿ ತನ್ನ ತಾಯಿಯಲ್ಲಿ ಹೇಳುತ್ತಿದ್ದ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಿ ಎಂದು ತಂದೆಯಲ್ಲಿ ಹೇಳಿದಾಗ ಮಕ್ಕಳಾಟಿಕೆ ಎಂದು ಅವರು ಅತ್ತ ಗಮನ ಹರಿಸಿರಲಿಲ್ಲ. ಬಾವಿ ತೋಡುವ ತನ್ನ ಕನಸನ್ನು ಕಾರ್ಯ ರೂಪಕ್ಕೆ ಇಳಿಸಿದ ಸೃಜನ್ ೨೦೨೦ ರ ಡಿಸೆಂಬರ್ ತಿಂಗಳಿನಲ್ಲಿ ಬಾವಿ ತೋಡಲಾರಂಭಿಸಿದ. ಸಣ್ಣ ಹೊಂಡವನ್ನು ನೋಡಿದ ಹಲವರು ಇದು ಬಾವಿಯೋ, ಇಂಗು ಗುಂಡಿಯೋ, ತೆಂಗಿನ ಗುಂಡಿಯೋ ಎಂದು ಅಣಕಿಸಿದ್ದರು. ಬಳಿಕ ಮಳೆ ಆರಂಭವಾದ್ದರಿಂದ ತನ್ನ ಕಾರ್ಯವನ್ನು ಅಲ್ಲಿಗೆ ನಿಲ್ಲಿಸಿದ್ದ.
ಕಾಲೇಜು ರಜೆಯಲ್ಲಿ ಮತ್ತೆ ಆರಂಭ:
ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸೃಜನ್ ಕಳೆದ ಮಾರ್ಚ್ನಲ್ಲಿ ಸಿಕ್ಕ ರಜೆಯ ವೇಳೆ ತನ್ನ ಬಾವಿ ತೋಡುವ ಕಾಯಕವನ್ನು ಪುನಾರಂಭಿಸಿದ. ತಂದೆ, ತಾಯಿ ಇಬ್ಬರೂ ಬೇಡವೆಂದರೂ ತನ್ನ ಪ್ರಯತ್ನ ಬಿಡದೆ ಬಾವಿ ತೋಡುವ ಕಾಯಕ ಮುಂದುವರೆಸಿದ.
ಹೊಂಡದಲ್ಲಿ ಮಣ್ಣನ್ನು ಅಗೆದು, ಅದನ್ನು ಬುಟ್ಟಿ ಹಾಗೂ ಬಕೆಟ್ ನಲ್ಲಿ ತುಂಬಿ, ಹಗ್ಗ ಕಟ್ಟಿ ಮತ್ತೆ ತಾನು ಹಗ್ಗದಿಂದ ಮೇಲೆ ಬಂದು, ಬುಟ್ಟಿಯಿಂದ ಮಣ್ಣನ್ನು ಎಳೆದು ರಾಶಿ ಹಾಕಿ ಏಕಾಂಕಿಯಾಗಿ ಬಾವಿ ತೋಡಿದ. ಅಚ್ಚರಿಯಿಂದರೆ ೨೪ ಅಡಿ ಆಳವಾಗುತ್ತಿದ್ದಂತೆಯೇ ಸೃಜನ್ ನ ಅವಿರತ ಪರಿಶ್ರಮಕ್ಕೆ ಫಲ ಸಿಕ್ಕಿತು. ಭಗೀರಥನ ಪ್ರಯತ್ನಕ್ಕೆ ಗಂಗೆ ಒಲಿದಂತೆ ಸೃಜನ್ ಪ್ರಯತ್ನಕ್ಕೆ ನೀರಿ ಚಿಮ್ಮಿತು. ಒಸರು ಹರಿದು ಈಗ ಅರ್ಧ ಬಾವಿ ಸಿಹಿ ನೀರಿನಿಂದ ತುಂಬಿ ಕೊಂಡಿದೆ.
ಕ್ರಿಯಾಶೀಲ ಬಾಲಕ:
ಬಿ.ಮೂಡ ಶಾಲೆಯ ಪ್ರಥಮ ಪಿಯುಸಿಯ ವಿದ್ಯಾರ್ಥಿಯಾಗಿರುವ ಸೃಜನ್ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಆತನಿಗೆ ಕೃಷಿ ಚಟುವಟಿಕೆಯೆಂದರೆ ಅಚ್ಚುಮೆಚ್ಚು. ಮನೆ ಪಕ್ಕ ತರಕಾರಿ ಬೆಳೆಸುವುದರಲ್ಲಿ ಆಸಕ್ತಿ. ತಂದೆ ಟೈಲರ್, ತಾಯಿಗೆ ಬೀಡಿ ಸುತ್ತುವ ಕೆಲಸ. ಸಹೋದರಿ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ. ಶಾಲೆಯ ಬಿಡುವಿನ ಸಮಯದಲ್ಲಿ ಎಲ್ಲೆಂದರಲ್ಲಿ ಪೋಲಿ ಅಲೆಯದೆ, ಮೊಬೈಲ್ ನಲ್ಲಿ ಜೋತಾಡದೆ ಪರಿಶ್ರಮ ಪಟ್ಟ ಪರಿಣಾಮವಾಗಿ ಸೃಜನ್ ಇಂದು ಸಾಧಕನಾಗಿ ಗುರುತಿಸಿಕೊಂಡಿದ್ದಾನೆ. ಮಗನ ಸಾಧನೆ ಪಾಲಕರಿಗೆ ಅತೀವ ಸಂತಸ ನೀಡಿದೆ. ಊರಿನ ಮಂದಿಯೂ ಭೇಷ್ ಎನ್ನುತ್ತಿದ್ದಾರೆ.