
ಬಂಟ್ವಾಳ: ಕಳೆದ ನಾಲ್ಕುವರೆ ವರ್ಷಗಳಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರವನ್ನು ಶಾಂತಿಯುತ ಬಂಟ್ವಾಳವಾಗಿ ಪರಿವರ್ತಿಸಿರುವ ತೃಪ್ತಿ ನನಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಕರೋಪಾಡಿ ಗ್ರಾ.ಪಂ. ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಕರೋಪಾಡಿ ಗ್ರಾಮದಲ್ಲಿ ೧೩ ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ, ಕ್ಷೇತ್ರ ವ್ಯಾಪ್ತಿಯಲ್ಲಿ ೨ ಸಾವಿರ ಕೋಟಿಗೂ ಹೆಚ್ಚು ಅನುದಾನಗಳ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ನಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳ ಪ್ರತಿಯೊಂದು ಸಹಿತ ದಾಖಲೆ ನಮ್ಮಲ್ಲಿದೆ, ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಮತದಾರರಲ್ಲಿ, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ಕೆಲವರಿಂದ ನಡೆಯುತ್ತಿದ್ದು, ಈ ಕುರಿತು ಎಚ್ಚರ ವಹಿಸುವಂತೆ ಅವರು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಿಂದ ಇಡೀ ಜಗತ್ತು ದೇಶದತ್ತ ನೋಡುತ್ತಿದೆ. ಇತ್ತೀಚಿಗೆ ನಡೆದ ಸರ್ವೇಯಲ್ಲೂ ಪ್ರಧಾನಿ ಮೋದಿಯವರು ನಂ.೧ ಸ್ಥಾನದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾರ್ಯಕರ್ತರು ಇದನ್ನು ಮನೆಮನೆಗೆ ತೆರಳಿ ಮನವರಿಕೆ ಮಾಡುವ ಮೂಲಕ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಂತೆ ಕರೆ ನೀಡಿದರು.

ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕರೋಪಾಡಿ ಶಕ್ತಿ ಕೇಂದ್ರದ ಪ್ರಮುಖ್ ಅನೆಯಾಲಕೋಡಿ ವಿಘ್ನೇಶ್ವರ ಭಟ್, ಕ್ಷೇತ್ರದ ಎಸ್.ಟಿ.ಮೋರ್ಚಾ ಅಧ್ಯಕ್ಷ ರಾಮ ನಾಯ್ಕ್ ಉಕ್ಕಿನಾರು, ಪಂಚಾಯಿತಿ ಸದಸ್ಯರಾದ ಪಟ್ಲಗುತ್ತು ರಘುನಾಥ ಶೆಟ್ಟಿ, ಅನೆಯಾಲಮಂಟಮೆ ಅಶ್ವತ್ಥ್ ಶೆಟ್ಟಿ, ಶಶಾಂಕ್ ಪದ್ಯಾಣ, ಪ್ರಸನ್ನ ಪದ್ಯಾಣ, ಜಯರಾಮ ನಾಯಕ್ ಮಿತ್ತನಡ್ಕ, ತಾಪಂ ಮಾಜಿ ಸದಸ್ಯ ರಘುರಾಮ ಶೆಟ್ಟಿ, ಯುವಮೋರ್ಚಾ ಪ್ರಮುಖರಾದ ವಿನೋದ್ ಶೆಟ್ಟಿ, ಕರೋಪಾಡಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶ್ರೀಲತಾ ಶೆಟ್ಟಿ ಪಟ್ಲ ಉಪಸ್ಥಿತರಿದ್ದರು.

ಕರೋಪಾಡಿ ಗ್ರಾಮದ ಗುಬ್ಯ ಮಾಯಿಲರ ಕಾಲನಿ ಕಾಂಕ್ರೀಟ್ ರಸ್ತೆ, ಕುಡಪಾಲ್ತಡ್ಕ ಕಲಾಯಿ ರಸ್ತೆ ಕಾಂಕ್ರೀಟ್ ರಸ್ತೆ, ಕಂದೇಲು- ಕುಳ ಕಾಂಕ್ರೀಟ್ ರಸ್ತೆ, ಗುಂಡಮಜಲು, ಪಾಲಿಗೆ, ಪಂಬತ್ತಾಜೆ ಕಾಂಕ್ರೀಟ್ ರಸ್ತೆ, ಪೆರ್ನೆಮೊಗರು ನಾಗಬನ ಬಳಿ ಕಾಲು ಸಂಕ ನಿರ್ಮಾಣ, ಪಟ್ಲ -ಮಾಂಬಾಡಿ – ಪಂಬತ್ತಾಜೆ ಕಾಂಕ್ರಿಟ್ರಸ್ತೆ, ದೇವಸ್ಯ ಪರಂದರ ಮೂಲೆ ಕಾಂಕ್ರೀಟ್ ರಸ್ತೆಗಳನ್ನು ಶಾಸಕರು ಉದ್ಘಾಟಿಸಿದರು
