
ಬಂಟ್ವಾಳ: ಮಂಗಳೂರು ಕ್ಷೇತ್ರ ಹಾಗೂ ಬಂಟ್ವಾಳ ಕ್ಷೇತ್ರದ ಹಲವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪೈಪ್ಲೈನ್ ಕಾಮಗಾರಿ ಗೊಂದಲದ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಆಲಡಿಯಲ್ಲಿ ನಿರ್ಮಾಣ ಗೊಂಡಿರುವ ಜಾಕ್ವೆಲ್ಗೆ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾ.ಪಂ.ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.

ಸಜೀಪ ಮುನ್ನೂರು ಸೇರಿದಂತೆ 5 ಗ್ರಾ.ಪಂ.ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಪ್ರಯತ್ನ ದಿಂದ 279 ಕೋಟಿ ರೂ ಗಳು ಮಂಜೂರಾಗಿದ್ದು, ಅದರ ಅನುಷ್ಠಾನ ಕೊಂಚ ವಿಳಂಬವಾಗುವುದರಿಂದ, ಈ ಗ್ರಾಮದ ಜನತೆಗೆ ಕುಡಿಯುವ ನೀರು ತತಕ್ಷಣ ನೀಡಲು ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಶುದ್ದೀಕರಣಕ್ಕಾಗಿ ಪಿಲ್ಟರ್ ಅಳವಡಿಸಿ, 0.2 ಎಂ.ಎಲ್.ಡಿ. ನೀರನ್ನು ಸಜೀಪ ಮುನ್ನೂರು ಗ್ರಾಮಕ್ಕೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜತೆಗೆ ಉಳ್ಳಾಲ ಹಾಗೂ ಬಂಟ್ವಾಳದ ಹಲವು ಗ್ರಾಮಗಳಿಗೆ ನೀರನ್ನು ಒದಗಿಸುವ ಕಚ್ಚಾನೀರು ಹಾಗೂ ಶುದ್ದೀಕರಣದ ನೀರಿನ ಪೈಪ್ಲೈನ್ ಅಳವಡಿಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅನುಮತಿ ನೀಡಲು ಗ್ರಾ.ಪಂ.ಗೆ ಮನವರಿಕೆ ಮಾಡಿದರು .
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಸಜೀಪ ಮುನ್ನೂರು ಗ್ರಾಮಕ್ಕೆ ಕುಡಿಯುವ ನೀರಿನ ವಿಚಾರದಲ್ಲಿ ಈ ಹಿಂದೆಯೂ ಅನ್ಯಾಯವಾಗಿರುವುದು ನಮಗೆ ತಿಳಿದಿದ್ದು, ಈಗಾಗಿ ಸತತ ಎರಡು ವರ್ಷಗಳ ಕಾಲ ಹೋರಾಟ ಮಾಡಿ, 279ಕೋಟಿ ರೂ. ಗಳ ಯೋಜನೆ ಮಂಜೂರು ಮಾಡಿಸಲಾಗಿದೆ, ಇದು ಬಂಟ್ವಾಳದ ಐದು ಗ್ರಾ.ಪಂ ಗಳಿಗೆ ಶಾಶ್ವತ ನೀರಿನ ಯೋಜನೆ ಯಾಗಿದೆ ಆದರೆ ತತಕ್ಷಣದ ಪರಿಹಾರಕ್ಕಾಗಿ ಕೊಳವೆ ಬಾವಿ ಕೊರೆದರು ನೀರು ಸಿಗದೆ ಇರುವದುದರಿಂದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಚಿವರನ್ನು ಸ್ಥಳಕ್ಕೆ ಕರೆಯಿಸಿ, ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರ ಎದುರಿನಲ್ಲಿ ಮಾತುಕತೆ ನಡೆಸಲಾಗಿದೆ, ಜತೆಗೆ ತಕ್ಷಣ ದ ಪರಿಹಾರಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರನ್ನು ಪಡೆಯಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಚಿವರು, ಸೂಚನೆಯನ್ನು ನೀಡಿದ್ದಾರೆ ಎಂದರು.

ಆಲಾಡಿ ಪ್ಲಾಂಟೇಷನ್ಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಬಳಿಕ ಸಚಿವರು ಹಾಗೂ ಶಾಸಕರು ಅಧಿಕಾರಿಗಳ ಜೊತೆ ಮುಡಿಪುವಿನಲ್ಲಿ ನಿರ್ಮಾಣ ಗೊಂಡಿರುವ ಶುದ್ದೀಕರಣ ಘಟಕಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸಬೀನಾ, ಗ್ರಾಮದ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಸಜೀಪ, ಸಂತೋಷ್ ಶೆಟ್ಟಿ ದಳಂದಿಲ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ, ಸಹಾಯಕ ಇಂಜಿನಿಯರ್ ಶೋಭಾಲಕ್ಮೀ, ಎ.ಇ.ಇ. ಜಿ.ಕೆ.ನಾಯ್ಕ್ , ಸಹಾಯಕ ಇಂಜಿನಿಯರ್ ಜಗದೀಶ್ ನಿಂಬಾಲ್ಕರ್, ತಾ.ಪಂ. ಇ.ಒ.ರಾಜಣ್ಣ, ಸಜೀಪ ಮುನ್ನೂರು ಪಿಡಿಒ ಲಕ್ಷಣ್, ಸಜೀಪ ಮೂಡ ಪಿಡಿಒ ಮಾಯಕುಮಾರಿ, ಕಂದಾಯ ನಿರೀಕ್ಷಕಿ ಸ್ವಾತಿ ಮತ್ತಿತರರು ಉಪಸ್ಥಿತರಿದ್ದರು.

