ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕೊನ ಪುದು ಗ್ರಾಮ ಪಂಚಾಯತ್ ಗೆ ಫೆ.25 ರಂದು ನಡೆದ ಚುನಾವಣೆಯ ಮತ ಎಣಿಕೆ ಶನಿವಾರ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿ ಮಂಗಳವಾರ ನಡೆದಿದ್ದು,ರಾತ್ರಿ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟಗೊಂಡು ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿತರು 21 ಸ್ಥಾನಗಳಲ್ಲಿ ಜಯಭೇರಿ ಸಾಧಿಸುವ ಮೂಲಕ ಮರಳಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಎಸ್.ಡಿ.ಪಿ.ಐ. ಬೆಂಬಲಿತ 7 ಸ್ಥಾನಗಳಲ್ಲಿ ಗೆಲುವನ್ನು ದಾಖಲಿಸಿದರೆ,ನಿರೀಕ್ಷಿತ 6 ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕಳೆದ ಅವಧಿಯಲ್ಲಿ 27 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಬೆಂಬಲಿತರು ಈ ಚುನಾವಣೆಯಲ್ಲಿ ಆರು ಸ್ಥಾನವನ್ನು ಕಳೆದುಕೊಂಡಿದ್ದು,ಒಂದು ಸ್ಥಾನದಲ್ಲಿದ್ದ ಎಸ್ ಡಿಪಿಐ ಆರು ಸ್ಥಾನವನ್ನು ಹೆಚ್ಚಿಸಿಕೊಂಡು 7 ಸ್ಥಾನ ಪಡೆದು ಬೀಗಿದೆ.ಇತ್ತ ಬಿಜೆಪಿ ಬೆಂಬಲಿತರು ನಿರೀಕ್ಷಿತ ಆರುಸ್ಥಾನವನ್ನು ಪಡೆದು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ.
ರಿಯಾಜ್,ಮಹಮ್ಮದ್,ಇಸಾಮ್,ರಜಿಯಾ,ರಮ್ಲಾನ್,ರಜಾಕ್,ಮಹಮ್ಮದ್ ಅನ್ಸ್,ಸಹರಾ,ಅಥಿಕಾ ,ಲಿಡಿಯಾ ಪಿಂಟೋ,ಇಕ್ಬಾಲ್ ಸುಜೀರ್, ಈಶು ಕುಮಾರ್,ಮಮ್ತಾಜ್,ರೆಹನಾ,ಹುಸೈನ್ ಪಾಡಿ,ನಬೀಸಾ,ರುಕ್ಸಾನ,ಜಯಂತಿ,ರಶೀದಾಬಾನು (ಎಲ್ಲರೂ ಕಾಂಗ್ರೆಸ್ ಬೆಂಬಲಿತ ವಿಜೇತರು)
ಪದ್ಮನಾಭ ಶೆಟ್ಟಿ ಪುಂಚಮೆ, ಸುಬ್ರಹ್ಮಣ್ಯರಾವ್,ಸುಗುಣ,ಮನೋಜ್ ಅಚಾರ್ಯ ನಾಣ್ಯ,ಸೋಮನಾಥ,ವಿದ್ಯಾ ( ಬಿಜೆಪಿ ಬೆಂಬಲಿತ ವಿಜೇತರು),ನವೀನ್ ಸಲ್ದಾನ, ರುಕ್ಸಾನ,ಖೈರುನ್ನಿಸಾ, ಶಾಫಿ ಅಮ್ಮೆಮಾರ್,ನಜೀರ್,ರೆಬೇಕಾ ಸಲ್ದಾನ,ಖೈರುನ್ನಿಸಾಸಿರಾಜ್ ( ಎಸ್ ಡಿಪಿಐ ಬೆಂಬಲಿತ ವಿಜೇತರು)
ತಹಶೀಲ್ದಾರ್ ದಯಾನಂದ ಕೆ.ಎಸ್.ಹಾಗೂ ಉಪತಹಸೀಲ್ದಾರ್ ನವೀನ್ ಬೆಂಜನಪದವು ಅವರ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ರಾತ್ರಿ 8.30 ರವರ ವೇಳೆಗೆ ಪೂರ್ಣಗೊಂಡಿತು.,
ಪುದು ಪಂಚಾಯತ್ ನ 10 ವಾಡ್೯ ನ ಒಟ್ಟು 34 ಸ್ಥಾನಗಳಿಗೆ 99 ಅಭ್ಯರ್ಥಿಗಳು ಕಣದಲ್ಲಿದ್ದರು.ಈ ಬಾರಿ ಮತಪತ್ರದ ಮೂಲಕವೇ ಮತದಾನ ನಡೆದಿದ್ದರಿಂದ ಮತ ಎಣಿಕೆ ಕಾರ್ಯ ನಿಧಾನಗತಿಯಲ್ಲಿ ಸಾಗಿತ್ತು.
ಪುದು ಗ್ರಾ.ಪಂ.ನಲ್ಲಿ ಒಟ್ಟು 11,164 ಮತದಾರರ ಪೈಕಿ 8,228 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು ,ಇದರಲ್ಲಿ 5730 ಗಂಡಸರ ಪೈಕಿ 4060 ಹಾಗೂ 5534 ಮಹಿಳೆಯರ ಪೈಕಿ 4168 ಮಂದಿ ಮತ ಚಲಾಯಿಸಿದ್ದಾರೆ.
ಮತ ಎಣಿಕಾ ಕೇಂದ್ರವಾದ ಬಿ.ಸಿ.ರೋಡಿನ ಆಡಳಿತ ಸೌಧದ ಮುಂಭಾಗ ಕಾಂಗ್ರೆಸ್ ಮತ್ತ ಎಸ್ ಡಿ ಪಿ ಐ ಪಕ್ಷದ ಬೆಂಬಲಿತರು ಜಮಾಯಿಸಿದ್ದರು.ಅವರವರ ಅಭ್ಯರ್ಥಿಗಳ ಗೆಲುವಿನ ಘೋಷಣೆಯಾಗುತ್ತಿದ್ದಂತೆ ಜೈಕಾರ ಮೊಳಗುತಿತ್ತು.ಬಂಟ್ವಾಳ ನಗರ ಪೊಲೀಸರು ವ್ಯಾಪಕ ಬಂದೋಬಸ್ತು ಏರ್ಪಡಿಸಿದ್ದರು.
ನಿಷೇದಾಜ್ಞೆ ಜಾರಿ:
ಮತ ಎಣಿಕೆಯ ಹಿನ್ನಲೆಯಲ್ಲಿ ವಿಜೇತ ಅಭ್ಯರ್ಥಿಗಳ ವಿಜಯೋತ್ಸವ ನಡೆಸದಂತೆ ಅತೀ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನಲೆಯಲ್ಲಿ ಪುದುಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ನಿಷೇದಾಜ್ಞೆಯನ್ನು ತಾಲೂಕಾಡಳಿತ ವಿಧಿಸಿತ್ತು.
ಜನಸಾಮಾನ್ಯರು ವಾಪಾಸ್:
ಮಾ.1 ರಿಂದ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ನಿರತರಾಗುವ ಹಿನ್ನಲೆಯಲ್ಲಿ ತಾಲೂಕಿನ ಗ್ರಾಮೀಣ ಭಾಗದ ಜನಸಾಮಾನ್ಯರು ವಿವಿಧ ಅರ್ಜಿಸಲ್ಲಿಕೆ ಸಹಿತ ವಿವಿಧ ಅಗತ್ಯದ ಕೆಲಸಕ್ಕಾಗಿ ಆಡಳಿತ ಸೌಧದ ಗೇಟೊನ ವರೆಗೆ ಬಂದು ಬಂದ ದಾರಿ ಸುಂಕವಿಲ್ಲದ ವಾಪಾಸಾಗಬೇಕಾದ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಪ್ರಸಂಗವು ನಡೆಯಿತು.
ಮತ ಎಣಿಕೆಯ ಹಿನ್ನಲೆಯಲ್ಲಿ ಅಡಳಿತ ಸೌಧದ ಸಿಬ್ಬಂದಿಗಳು ಹಾಗು ನೋಂದಣಿ ಕಚೇರಿಯ ಕೆಲಸಕಾರ್ಯಕ್ಕೆ ಹೊರತು ಪಡಿಸಿ ಯಾವುದೇ ಕಾರ್ಯಗಳು ಮಂಗಳವಾರ ನಡೆದಿಲ್ಲ,ಎಲ್ಲಾ ಸಿಬ್ಬಂದಿಗಳು ಮತ ಎಣಿಕಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು.ಆದರೆ ಅರ್ಜಿ ಸ್ವೀಕಾರದಲ್ಲಿ ಸಿಬ್ಬಂದಿಗಳಿದ್ದರೂ ಇಲ್ಲಿಗಾಗಮಿಸುತ್ತಿದ್ದ ಪೊಲೀಸರು ಗೇಟ್ ನಲ್ಲಿಯೇ ತಡೆದು ವಾಪಾಸ್ ಕಳಿಸಿದ್ದರಿಂದ ಅರ್ಜಿ ಸ್ವೀಕಾರ ಕೇಂದ್ರ ಬಿಕೋಆಗಿತ್ತು.ಆದರೆ ನೋಂದಣಿ ಕಚೇರಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಜನರ ,ವಕೀಲರ ಪ್ರವೇಶ ನೀಡಲಾಗಿತ್ತು.
ಮತ ಎಣಿಕೆಯ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಫೆ. ೨೮ ರಂದು ಪ್ರವೇಶವಿಲ್ಲ ಎಂಬ ಎಂಬ ಮಾಹಿತಿಯನ್ನು ತಾಲೂಕಾಡಳಿತ ಮಾಧ್ಯಮದ ಮೂಲಕ ಪ್ರಕಟಿಸದಿರುವುದರಿಂದ ಜನಸಾಮಾನ್ಯರು ತಾಲೂಕು ಕಚೇರಿಗೆ ಬಂದು ಬರಿಗೈಯಲ್ಲಿ ವಾಪಾಸ್ ಆಗಬೇಕಾಯಿತು.ಇದೀಗ ಮಾ.1 ರಿಂದ ಸರಕಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸುವುದರಿಂದ ಸಾರ್ವಜನಿಕರು ಮತ್ತೆ ತಮ್ಮ ಅಗತ್ಯ ಕೆಲಸಕ್ಕಾಗಿ ಪರದಾಡುವ ಸಾಧ್ಯತೆ ಇದೆ.