ಮಂಗಳೂರು: ತಮ್ಮ ಕಚೇರಿಯಲ್ಲಿ ಪ್ರತಿದಿನವೂ ಸ್ವಚ್ಛತೆಯ ಕೆಲಸ ಮಾಡುವ ಹಿರಿಯ ಮಹಿಳೆಯೂ ಸೇರಿ, 32 ಸಿಬ್ಬಂದಿಯನ್ನು ವಿಮಾನದ ಮೂಲಕ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕರೆದುಕೊಂಡು ಹೋಗಿರುವ ಸಂಸ್ಥೆಯೊಂದರ ಮುಖ್ಯಸ್ಥರು ತಮ್ಮ ಬಹುಕಾಲದ ಕನಸು ಪೂರೈಸಿದ್ದಾರೆ.
ಸಹಕಾರಿ ವಲಯದಲ್ಲಿ ಸಾಫ್ಟ್ವೇರ್ ಒದಗಿಸುವ ಪ್ರಮುಖ ಸಂಸ್ಥೆ ಆಟೋಮೇಶನ್ ಕ್ಲೌಡ್ ಸೊಲ್ಯೂಶನ್ಸ್ನ ಮುಖ್ಯಸ್ಥರಾದ ಜಗದೀಶ್ ರಾಮ ಮತ್ತು ಲೋಕೇಶ್ ಎನ್. ತಮ್ಮ ಸಂಸ್ಥೆಯ ನೌಕರರಿಗೆ ವಿಮಾನ ಪ್ರಯಾಣದ ಅನುಭವ ಒದಗಿಸಿದ್ದಾರೆ. ಒಟ್ಟು 34 ಜನ ವಿಮಾನದಲ್ಲಿ ಮಂಗಳೂರಿಂದ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ನಂದಿ ಹಿಲ್ಸ್, ಈಶ ಫೌಂಡೇಶನ್ಗೆ ತೆರಳಿ ಕೆಲವು ಪುಣ್ಯಕ್ಷೇತ್ರಗಳಿಗೂ ತೆರಳಿದ್ದಾರೆ. ಈ ಪೈಕಿ 28 ಜನರಿಗೆ ಇದು ಮೊದಲ ಸಲ ವಿಮಾನ ಪ್ರಯಾಣದ ಅನುಭವ. ಈ ಪೈಕಿ ಕಚೇರಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಸಿಬ್ಬಂದಿ ಕಸ್ತೂರಿ ಅವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಿದ್ದರು. ಕೋ ಆಪರೇಟಿವ್ ಸೊಸೈಟಿಗಳಿಗೆ ತಂತ್ರಾಂಶ ಒದಗಿಸುವ ರಾಜ್ಯದ ಮುಂಚೂಣಿಯ ಸಂಸ್ಥೆಯಾದ ಆಟೋಮೇಶನ್ 2000 ಗ್ರಾಹಕರ ಗುರಿ ಮುಟ್ಟಿದ ಸಂಭ್ರಮದ ಅಂಗವಾಗಿ ಈ ಪ್ರವಾಸ ಆಯೋಜಿಸಿತ್ತು.
ನಾವು ಮೊದಲ ಸಲ ವಿಮಾನದಲ್ಲಿ ಪ್ರಯಾಣ ಮಾಡುವಾಗ ಸಂಸ್ಥೆಯ ಎಲ್ಲರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಬೇಕೆಂಬ ಕನಸು ಇತ್ತು. ಅದು ಈ ಮೂಲಕ ನನಸಾಗುತ್ತಿದೆ. ರಾಜ್ಯಾದ್ಯಂತ 2000 ಗ್ರಾಹಕರನ್ನು ಹೊಂದಿರುವ ಸಂತೋಷವನ್ನು ಸಿಬ್ಬಂದಿ ಜತೆ ಸೇರಿ ಈ ರೀತಿ ಆಚರಿಸಿದ್ದೇವೆ ಎಂದು ಆಟೋಮೇಶನ್ ಕ್ಲೌಡ್ ಸೊಲ್ಯುಶನ್ನ ಮ್ಯಾನೇಜಿಂಗ್ ಡೈರೆಕ್ಟರ್ ಜಗದೀಶ್ ರಾಮ ಮತ್ತು ಚೇರ್ಮನ್ ಲೋಕೇಶ್ ಎನ್ ತಿಳಿಸಿದ್ದಾರೆ.
“ಜೀವನದಲ್ಲಿ ಇದೇ ಮೊದಲ ಸಲ ವಿಮಾನದಲ್ಲಿ ಪ್ರಯಾಣ ಮಾಡಿದ ಅನುಭವ ಆಯಿತು. ವಿಮಾನದಲ್ಲಿ ಪ್ರಯಾಣ ಮಾಡುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ಆಟೋಮೇಶನ್ ಕ್ಲೌಡ್ ಸಂಸ್ಥೆಯ ಮುಖ್ಯಸ್ಥರು ನನಗೆ ಈ ಅವಕಾಶ ಒದಗಿಸಿಕೊಟ್ಟರು. ಹಲವು ಬೆಂಗಳೂರಿನ ಹಲವು ಪುಣ್ಯಕ್ಷೇತ್ರಗಳ ದರ್ಶನ ಮಾಡಿದ್ದು ಖುಷಿಯಾಗಿದೆ.”-
ಕಸ್ತೂರಿ, ಆಟೋಮೇಶನ್ ಕ್ಲೌಡ್ ಸಂಸ್ಥೆಯ ಸಿಬ್ಬಂದಿ