
ಬಂಟ್ವಾಳ: ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಮಾನಸಿಕ ಹಾಗೂ ದೈಹಿಕ ದೃಢತೆ ಹೆಚ್ಚಾಗುವುದರೊಂದಿಗೆ ನಮ್ಮಲ್ಲಿ ಧನಾತ್ಮಕ ಚಿಂತನೆಗೆ ಪ್ರೇರಣೆ ನೀಡುತ್ತದೆ. ಎಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಹೇಳಿದರು.
ಅವರು ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಲಕ್ಷ್ಮಿ ಸರಸ್ವತಿ, ಶಕ್ತಿಯನ್ನು ನೀಡುವ ಜಗದಂಬಿಕೆಯನ್ನು ಆರಾಧಿಸುವುದು ಧಾರ್ಮಿಕ ಕರ್ತವ್ಯ, ಜಡ ವಸ್ತುಗಳಲ್ಲಿ ಚೈತನ್ಯ ನೀಡುವವಳು ಜಗದಂಬಿಕೆ ಎಂದರು. 64 ಕ್ಷೇತ್ರ ಕಲೆಗಳನ್ನು ಕ್ರೋಡಿಕರಿಸಿ ವ್ಯಕ್ತಿತ್ವವನ್ನು ರೂಪಿಸಲು ದೇವಸ್ಥಾನಗಳು ಬೇಕು. ವಿಚಾರಗಳನ್ನು ಆಚಾರದಲ್ಲಿ ಅನುಷ್ಠಾನ ಮಾಡಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಈ ಭಾಗಕ್ಕೆ ಚೇತನ ಕೊಡುವ ಕಾರ್ಯ ಬ್ರಹ್ಮಕಲಶೋತ್ಸದ ಮೂಲಕ ಆಗಿದೆ. ಊರ ಸಮಸ್ತ ಭಕ್ತಾಭಿಮಾನಿಗಳಲ್ಲಿ ಪ್ರಸನ್ನತೆ ಮೂಡಿಸುವ ಕಾರ್ಯಕ್ರಮ ನಡೆದಿದೆ ಎಂದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಉಪವಿಭಾಗದ ಎಎಸ್ಪಿ ಪ್ರತಾಪ್ ಸಿಂಗ್ ಥೋರಾಟ್, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಮಲ್ಲಿ, ಶ್ರೀ ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಭಾಸ್ಕರ್ ರಾವ್ ಮತ್ತು ತಂಡದವರಿಂದ ನಿರ್ಮಾಣಗೊಂಡ ಶ್ರೀ ಚಂಡಿಕೆ ಜಗದಂಬಿಕೆ ಯೂಟ್ಯೂಬ್ ಮಾಲಿಕೆ ಬಿಡುಗಡೆಗೊಂಡಿತು.


ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರ ರಾವ್ ವಂದಿಸಿದರು, ಜೊತೆ ಕಾರ್ಯದರ್ಶಿ ಐತಪ್ಪ ಪೂಜಾರಿ ನಿರೂಪಿಸಿದರು
