ಬಂಟ್ವಾಳ: ನಾವೂರು ಗ್ರಾಮ ಪಂಚಾಯತಿಯಲ್ಲಿ ಆಗುತ್ತಿರುವ ಅವ್ಯವಸ್ಥೆಯ ವಿರುದ್ಧ ಬಿಜೆಪಿ ವತಿಯಿಂದ ಗುರುವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿತು.
9/11, ಕಟ್ಟಡ ಪರವಾನಿಗೆ , ನಿರಾಕ್ಷೇಪಣಾ ಪತ್ರ, ಕಾಲುದಾರಿ ಸಮಸ್ಯೆ , ಪಂಚಾಯತಿ ರಸ್ತೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗೂ ಗ್ರಾಮ ಸಭೆಯಲ್ಲಿ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ತಿಳಿಸಿದರು.
ಕುಡಿಯುವ ನೀರಿನ ಪೈಪ್ ದುರಸ್ತಿ ಹಾಗೂ ಪಂಪು ಕೆಟ್ಟು ಹೋದಾಗ ದೂರು ನೀಡಿದರೆ ವಾರ್ಡಿನ ಸದಸ್ಯರು ಸರಿ ಮಾಡುತ್ತಾರೆ ಎಂದು ಸಮಜಾಯಿಷಿಕೆ ನೀಡುತ್ತಾರೆ, ಸರಕಾರಿ ಜಾಗದಲ್ಲಿ ನಿವೇಶನ ಮಂಜೂರಾಗಿ ಮನೆ ಮಾಡಿ ವಾಸವಿರುವ ಮನೆಗಳಿಗೆ ಹೋಗುವ ರಸ್ತೆಯನ್ನು ಪಂಚಾಯತ್ ರಸ್ತೆ ಎಂದು ನಮೂದು ಮಾಡುತ್ತಿಲ್ಲ, ಕರ್ನಾಟಕ ಸರಕಾರ ಗ್ರಾಮ ಒನ್ ಕಾರ್ಯಕ್ರಮ ನೀಡಿ ಗ್ರಾಮ ಪಂಚಾಯತ್ನಲ್ಲಿ ಎಲ್ಲಾ ಸವಲತ್ತು ಸಿಗುವಂತೆ ಮಾಡಿದರೂ, ನಾವೂರು ಪಂಚಾಯತ್ನಲ್ಲಿ ಇದು ಆಗುತ್ತಿಲ್ಲ, ಮನೆ ನಿವೇಶನ ಮಂಜೂರು ಆದಾಗ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಮನೆ ಇದೆ ಎಂದು ನಮೂದು ಮಾಡಿದರೂ, ಪಂಚಾಯತಿ ಅಧಿಕಾರಿಗಳು ಮನೆಯ ಅರ್ಹತೆ ಸರ್ಟಿಫಿಕೇಟ್ ಕೇಳುತ್ತಾರೆ, ಗ್ರಾಮ ಪಂಚಾಯತ್ನಿಂದ ಎನ್ಒಸಿ ಕೇಳಿದಾಗ ಪರಿಶೀಲನೆ ಮಾಡಿ ನೀಡುವ ಬದಲು ನಮಗೆ ಆಕ್ಷೇಪ ಇದೆ ಎನ್ನುವ ಉತ್ತರ ನೀಡುತ್ತಾರೆ, ಪಂಚಾಯತಿ ಸಾಮಾನ್ಯ ಸಭೆಯ ನೋಟೀಸು ಸದಸ್ಯರಿಗೆ 7 ದಿನದ ಮೊದಲು ನೀಡುವ ಬದಲು 5 ದಿನ, 4ದಿನದ ಮೊದಲು ನೀಡುತ್ತಿದ್ದಾರೆ. ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡುವ ಅಧಿಕಾರ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಇದ್ದರೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ನಿರ್ಣಯ ಮಾಡಲು ಬಿಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪು ತೆಗೆದು ಮೇಲೆ ಹಾಕಿದ್ದು, ಅದನ್ನು ಈವರೆಗೆ ಮಣ್ಣಿನ ಅಡಿಗೆ ಹಾಕುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಪ್ರತಿಭಟನಕಾರರರು ಪಂಚಾಯತ್ ಅವ್ಯವ್ಯವಸ್ಥೆಗೆ ಕಾರಣರಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರನ್ನು ವರ್ಗಾವಣೆ ಮಾಡಿ, ಗಾಮ ಪಂಚಾಯತಿ ಅಧ್ಯಕ್ಷರನ್ನು ಪದಚ್ಯುತಿಗೊಳಿಸಿ, ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಪಂಚಾಯತಿ ವ್ಯವಸ್ಥೆ ಬಲ ಪಡಿಸುವಂತೆ ಆಗ್ರಹಿಸಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ದಿನೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಬಿಜೆಪಿ ನಾವೂರು ಶಕ್ತಿ ಕೇಂದ್ರದ ಪ್ರಮುಖರಾದ ಸದಾನಂದ ನಾವೂರು, ವಿಎಸ್ಎಸ್ ಬ್ಯಾಂಕಿನ ನಿರ್ದೇಶಕ ಹರೀಶ್, ಪಂಚಾಯತಿ ಸದಸ್ಯರಾದ ವಿಜಯ್, ಜನರ್ದನ, ನಾರಾಯಣ, ಇಂದಿರಾ, ತ್ರಿವೇಣಿ, ಲೀಲಾ ಅಪ್ಪಿ ಸಹಿತ ಬೂತ್ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
—