
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೇಂದ್ರ ಸರ್ಕಾರದ ನಿಕ್ಷಯ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ಧಾನ್ಯ ವಿತರಣಾ ಕಾರ್ಯಕ್ರಮ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಆಹಾರ ಧಾನ್ಯ ಕಿಟ್ ವಿತರಿಸಿ ಮಾತನಾಡಿ ನಿಕ್ಷಯ ಮಿತ್ರ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ವಿಶಿಷ್ಟ ಕಲ್ಪನೆಯಾಗಿದ್ದು ಭಾರತದೇಶವನ್ನು ಕ್ಷಯ ಮುಕ್ತ ರಾಷ್ಟ್ರವನ್ನಾಗಿ ಮಾಡಬೇಕೆನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಪೌಷ್ಠಿಕ ಆಹಾರ ಕ್ಷಯರೋಗಿಗಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದು ಸರಿಯಾದ ಪೌಷ್ಠಿಕ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿದ್ದಲ್ಲಿ ರೋಗದಿಂದ ಗುಣಮುಖರಾಗಲು ಸಾಧ್ಯವಿದೆ. ಕೇಂದ್ರ ಸರ್ಕಾರ ಸ್ಥಳೀಯ ಸೇವಾ ಸಂಸ್ಥೆಗಳ ಮೂಲಕ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು ಈ ಭಾಗದಲ್ಲಿ ಸೇವಾಂಜಲಿ ಪ್ರತಿಷ್ಠಾನ ಈ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಕೃಷ್ಣ ಕುಮಾರ್ ಪೂಂಜ ಅವರು ಹಲವಾರು ವರ್ಷಗಳಿಂದ ಇಂತಹ ಸೇವಾ ಕಾರ್ಯವನ್ನು ಮಾಡುತ್ತಿದ್ದು ನಾವು ಅವರಿಗೆ ಸಹಕಾರ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ, ಆಹಾರದ ಕಿಟ್ ಪಡೆದವರು ಪೌಷ್ಠಿಕ ಆಹಾರವನ್ನು ಸೇವಿಸಿ ರೋಗ ಮುಕ್ತರಾಗಿ ಸಮಾಜದಲ್ಲಿ ಸಾಮಾನ್ಯ ಜನರಂತೆ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಮಾತನಾಡಿ ದೇಶವನ್ನು ಕ್ಷಯ ರೋಗ ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ ನಿಕ್ಷಯ ಮಿತ್ರ ಯೋಜನೆಯಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸೇವಂಜಲಿ ಸಂಸ್ಥೆ ದಾನಿಗಳ ಸಹಕಾರದೊಂದಿಗೆ ಆಹಾರ ಧಾನ್ಯ ವಿತರಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. ಸೇವಾಂಜಲಿಯ ಈ ಕಾರ್ಯವನ್ನು ಸ್ವತಃ ರಾಜ್ಯಪಾಲರೇ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ. ಜೋಸ್ ಥೋಮಸ್, ಮೇರಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ವೃಂದ ಪೂಜಾರಿ ಪ್ರಮುಖರಾದ ಆರ್.ಎಸ್. ಜಯ ರಾಮಲ್ಕಟ್ಟೆ, ಕೇಶವ ಪೂಜಾರಿ ಮೇರಮಜಲು, ಸುಕುಮಾರ್ ಅರ್ಕುಳ, ಎಂ.ಆರ್. ನಾಯರ್, ಪದ್ಮನಾಭ ಕಿದೆಬೆಟ್ಟು
ಸುಕೇಶ್ ಶೆಟ್ಟಿ ತೇವು, ವಿಕ್ರಂ ಬರ್ಕೆ, ಪ್ರಶಾಂತ್ ಕುಮಾರ್ ತುಂಬೆ, ಮನೋಹರ ನಾಯ್ಕ್ ಅರ್ಕುಳ, ಕೃಷ್ಣ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.
