ಬಂಟ್ವಾಳ: ಪ್ರೌಢಾವಸ್ಥೆಗೆ ಬಂದ ಮಕ್ಕಳೊಂದಿಗೆ ನಾವು ಸ್ನೇಹಿತರಂತೆ ವರ್ತಿಸಬೇಕು, ಮಕ್ಕಳು ಏನೇ ಸಮಸ್ಯೆಯಿದ್ದರೆ ನಮ್ಮ ಜೊತೆ ಹಂಚಿ ಕೊಳ್ಳುವಂತಹ ಆತ್ಮೀಯತೆಯನ್ನು ಪೋಷಕರು ಬೆಳೆಸಿಕೊಳ್ಳಬೇಕು ಎಂದು ವೇಣೂರು ಪೊಲೀಸ್ ಠಾಣೆಯ ಎಸೈ ಸೌಮ್ಯ ಜೆ. ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಆಶ್ರಯದಲ್ಲಿ, ಬಂಟ್ವಾಳದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆಯುವ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪರಿಸರದಲ್ಲಿ ಪೋಕ್ಸೊದಂತಹ ಪ್ರಕರಣಗಳು ನಡೆದಾಗ ಪೊಲೀಸರಿಗೆ ಮಾಹಿತಿ ನೀಡಿಲು ಪೋಷಕರು ಹಿಂಜರಿಯ ಬಾರದು. ಮನೆಯಲ್ಲಿರುವ ಬಂಗಾರ, ಹಣ ಮೊದಲಾದ ಅಮೂಲ್ಯ ವಸ್ತುಗಳು ಬಗ್ಗೆ ನಿಗಾ ವಹಿಸಬೇಕು, ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮಕ್ಕಳಿಗೆ ವಾಹನ ನೀಡಬಾರದು ಮೊದಲಾದ ಸಲಹೆಗಳನ್ನು ನೀಡಿದರು.
ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಡಾ. ಮೇರಿ ಎಂ.ಜೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಂಸಾರ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್. ಭಂಡಾರಿ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಜ್ಞಾನ ವಿಕಾಸ ವಿಭಾಗದ ನಿರ್ದೇಶಕ ವಿಠಲ್ ಪೂಜಾರಿ, ಜನಜಾಗೃತಿ ವೇದಿಕೆ ಮಾಣಿ ವಲಯದ ಜಯಂತಿ ವಿ.ಪೂಜಾರಿ, ಮಹಮ್ಮಾಯಿ ದುರ್ಗಾಂಬಾ ಮಹಿಳಾ ಸಂಘದ ಸದಸ್ಯೆ ಲೀಲಾವತಿ.
ಯೋಜನಾಧಿಕಾರಿ ಜಯಾನಂದ ಪಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನ ಮೊದಲಾದವರು ಉಪಸ್ಥಿತರಿದ್ದರು.