ಬಂಟ್ವಾಳ: ಅಧಿಕಾರ ಶಾಶ್ವತವಲ್ಲ. ಆದರೆ ಶಾಸಕನಾಗಿ ಅಧಿಕಾರದಲ್ಲಿರುವ ವರೆಗೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ನಾನು ಸಿದ್ದಾಂತ ರಾಜಕೀಯ ಮಾಡುತ್ತೇನೆಯೇ ವಿನಃ ದ್ವೇಷದ ರಾಜಕಾರಣ ನನ್ನಲ್ಲಿಲ್ಲ.
ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಪೆರಾಜೆ ಗ್ರಾಮದ ಗುಡ್ಡ ಚಾಮುಂಡೇಶ್ವರೀ ದೈವಸ್ಥಾನದ ವಠಾರದಲ್ಲಿ ನಡೆದ ಗ್ರಾಮ ವಿಕಾಸ ಪಾದಯಾತ್ರೆಯ 4 ನೇ ದಿನದ ಸಾರ್ವಜನಿಕ ಸಭೆಯಲ್ಲಿ ಅವರು ಪ.
ಪರಿಚಯವೇ ಇಲ್ಲದ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಸಂದರ್ಭದಲ್ಲೂ 65 ಸಾವಿರ ಮಂದಿ ನನಗೆ ಮತ ನೀಡಿದ್ದು ವಿಶೇಷವಾಗಿತ್ತು. ಬಳಿಕ ನಿರಂತರವಾಗಿ ಕೆಲಸ ಮಾಡಿದ ಪರಿಣಾಮ ಮತ್ತೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು.
ಅಭಿವೃದ್ಧಿ ಕೆಲಸದ ಮೂಲಕ ಮತವಾಗಿ ಪರಿವರ್ತನೆ ಮಾಡುವ ಕಾರ್ಯ ಆಗ ಬೇಕಿದೆ ಎಂದರು. ಇಂದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಜನರು ಬುದ್ದಿವಂತರಿದ್ದಾರೆ. ಶಾಸಕನಾಗಿ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಜನರು ಪ್ರೀತಿ, ವಿಶ್ವಾಸವನ್ನು ನೀಡಿದ್ದಾರೆ. ಅಭಿವೃದ್ದಿ ಕಾರ್ಯ ಮಾಡಿದಾಗ ಮಾತ್ರವಲ್ಲ, ನಾನು ಸೋತಾಗಲೂ ಇಲ್ಲಿನ ಜನರು ಇದೇ ರೀತಿ ಪ್ರೀತಿ ನೀಡಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ ಶಾಸಕ ರಾಜೇಶ್ ನಾಯ್ಕ್ ಅವರು ರಾಜಧರ್ಮ ಪಾಲನೆ ಮಾಡಿ ಜಾತಿ, ಧರ್ಮ, ಪಕ್ಷದ ಭೇದವಿಲ್ಲದೆ ಎಲ್ಲಾ ಜನರು ನಿರಾಂತಕವಾಗಿ ಬದುಕುವ ವಾತವರಣವನ್ನು ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಪುತ್ತೂರಿನ ವೈದ್ಯ ಡಾ. ಪ್ರಸಾದ್ ಭಂಡಾರಿ ಮಾತನಾಡಿ ಶಾಸಕ ರಾಜೇಶ್ ನಾಯ್ಕ್ ಅವರಿಂದ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಿದೆ. ಮುಂದಿನ ಚುನಾವಣೆಯಲ್ಲೂ ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸುವ ಕಾರ್ಯ ಮಾಡಬೇಕು ಎಂದರು.
ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್ ಅಧ್ಯಕ್ಷತೆ ವಹಿಸಿದ್ದರು.
ಕ.ನ.ನೀ.ಸ. ಮಂಡಳಿಯ ನಿರ್ದೇಶಕಿ ಸುಲೋಚನಾ ಭಟ್, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸಹಸಂಚಾಲಕ ಮಾಧವ ಮಾವೆ, ಪ್ರಮುಖರಾದ ಸನತ್ ಕುಮಾರ್ ರೈ, ಸತೀಶ ಪೂಜಾರಿ, ಗಣೇಶ್ ಪೂಜಾರಿ, ವೇದಿಕೆಯಲ್ಲಿದ್ದರು.
ಉಮೇಶ್ ಎಸ್. ಪಿ. ಸ್ವಾಗತಿಸಿದರು. ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ರಾಜರಾಮ್ ಕಾಡೂರು ವಂದಿಸಿದರು, ಯತಿರಾಜ್ ಪೆರಾಜೆ ನಿರೂಪಿಸಿದರು.
ಮಂಗಳವಾರ ಬೆಳಿಗ್ಗೆ ವೀರಕಂಭ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಿಂದ ಪಾದಯಾತ್ರೆ ಹೊರಟು ಸಂಜೆ ಪೆರಾಜೆ ಸಾದಿಕುಕ್ಕು ಶ್ರೀ ಗುಡ್ಡೆ ಚಾಮುಂಡಿ ಕ್ಷೇತ್ರದಲ್ಲಿ ಸಮಾಪನ ಗೊಂಡಿತು.