ಬಂಟ್ವಾಳ: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ವಾರ್ಷಿಕ ಸಹಮಿಲನ ಕಾರ್ಯಕ್ರಮ ಸಂಚಯಗಿರಿಯಲ್ಲಿ ಭಾನುವಾರ ಸಂಜೆ ನಡೆಯಿತು. ಸ್ಥಳೀಯ ಹಿರಿಯ ನಾಗರಿಕ, ಪರಿಸರವಾದಿ ಎ. ದಾಮೋದರ ದೀಪ ಪ್ರಜ್ವಲಿಸಿದರು. ಅವರು ಮಾತನಾಡಿ ಸಂಚಯಗಿರಿ ಪ್ರದೇಶ ಇಂದು ಕೇವಲ ಬಂಟ್ವಾಳಕ್ಕೆ ಮಾತ್ರ ಪರಿಚಿತವಾಗಿ ಉಳಿದಿಲ್ಲ. ಇಲ್ಲಿನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮೂಲಕ ದೇಶ ವಿದೇಶಗಳಲ್ಲೂ ಪರಿಚಿತವಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರಮಾಶಂಕರ್ ಮಾತನಾಡಿ ಸಂಚಯ ಎಂದರೆ ಸಂಗ್ರಹ, ಸಂಗ್ರಹವಾದಾಗ ಒಗ್ಗಟ್ಟಾಗುತ್ತದೆ. ಒಗ್ಗಟ್ಟು ಐಕ್ಯತೆ ಇರಬೇಕಾದರೆ ಸಹಯೋಗವೂ ಬೇಕು ಎಂದು ತಿಳಿಸಿದರು.
ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಚಯಗಿರಿ ಬಡವಾಣೆಯ ನಾಗರಿಕರು ಹೃದಯವಂತರು. ನಾಗರಿಕ ಕ್ರಿಯಾ ಸಮಿತಿಯ ಮೂಲಕ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಪೊಳಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಧಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಪುರಸಭಾ ಸದಸ್ಯ ಹರಿಪ್ರಸಾದ್ ಭಾಗವಹಿಸಿದ್ದರು. ಸಮಿತಿಯ ಉಪಾಧ್ಯಕ್ಷೆ ಪ್ರಿಯಲತಾ, ಗೌರವಾಧ್ಯಕ್ಷ ನರಸಿಂಹ ರಾಜ ಹೊಳ್ಳ, ಕ್ರೀಡಾ ಕಾರ್ಯದರ್ಶಿ ಪುರಂದರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಶಿವನಾಯ್ಕ್ ಸ್ವಾಗತಿಸಿದರು. ಕೋಶಾಧಿಕಾರಿ ರಾಮಕೃಷ್ಣ ನಾಯ್ಕ್ ವಂದಿಸಿದರು. ಆಶಾಲತಾ ಸನ್ಮಾನ ಪತ್ರ ವಾಚಿಸಿದರು, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ, ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಾರ್ಷಿಕೋತ್ಸವ ಕಾರ್ಯಕ್ರಮದಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.