
ಬಂಟ್ವಾಳ: ಸಹಕಾರ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿ ವಿವಿಧ ಕ್ಷೆತ್ರದಲ್ಲಿ ಸಲ್ಲಿಸಿದ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯದ ಕನ್ನಡಪ್ರಭ ದಿನಪತ್ರಿಕೆ ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ ಏಷಿಯಾನೆಟ್ ಸುವರ್ಣನ್ಯೂಸ್ ನವರು ಕೊಡಮಾಡುವ ರಾಜ್ಯ ಮಟ್ಟದ “ಕರ್ನಾಟಕ ಸಹಕಾರ ಶಿರೋಮಣಿ 2025 ಪ್ರಶಸ್ತಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಭಾಜನರಾಗಿದ್ದಾರೆ. ಇವರು ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಪ್ರಸ್ತುತ ಅಧ್ಯಕ್ಷರಾಗಿ ಕಳೆದ 6 ವರ್ಷಗಳಲ್ಲಿ ಸಹಕಾರ ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸಿರುವುದಲ್ಲದೆ ಸಂಘದ ವತಿಯಿಂದ ಸಾಧಕರಿಗೆ ಅಭಿನಂದನೆ, ವಿದ್ಯಾರ್ಥಿಗಳಿಗೆ ನೆರವು, ಅನಾರೋಗ್ಯ ವ್ಯಕ್ತಿಗಳ ಚಿಕಿತ್ಸೆ ವೆಚ್ಚಕ್ಕೆ ಸಹಕಾರ, ಕೋವಿಡ್ ಸಮಯದಲ್ಲಿ ಆರೋಗ್ಯ ಇಲಾಖೆಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಆರ್ಥಿಕ ಸಹಾಯದೊಂದಿಗೆ ಗೌರವರ್ಪಣೆ, ಮಹಿಳೆಯರಿಗೆ ಉಚಿತ ಸ್ವಉದ್ಯೋಗ ಟೈಲರಿಂಗ್ ತರಬೇತಿಗಳು, ಸೇರಿದಂತೆ ಹತ್ತು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಯೋಜನೆಗಳ ಬಗ್ಗೆ ಮತ್ತು ಸಾರ್ವಜನಿಕ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆದು ಸಹಕಾರ ಸಂಘವನ್ನು ಜನಪರ ಸಂಘವನ್ನಾಗಿ ರೂಪಿಸಿದ್ದಾರೆ. ಇತ್ತೀಚಿಗೆ ಬೆಂಗಳೂರುನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಸಚಿವರಾದ ಶಿವಾನಂದ ಪಾಟೀಲ್, ಚೆಲುವರಾಯ ಸ್ವಾಮಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಧ್ಯಮ ಸಂಪಾದಕ ರವಿ ಹೆಗಡೆ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.


Advertisement







