
ಬಂಟ್ವಾಳ: ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದುದು. ಸಂಕಷ್ಟದಲ್ಲಿರುವವರಿಗೆ ನೆರವಾದಾಗ ನಮ್ಮ ಕಷ್ಟಕಾರ್ಪಣ್ಯ, ರೋಗರುಜಿನಗಳು ದೂರವಾಗುತ್ತದೆ ಎಂದು ಮೇರಮಜಲು ಚರ್ಚಿನ ಧರ್ಮಗುರುಗಳಾದ ವಂದನೀಯ ರೆವರೆಂಡ್ ಫಾದರ್ ವಿಲಿಯಂ ಮಿನೇಜಸ್ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ಹಾಗೂ ದವಸ ಧಾನ್ಯ ವಿತರಿಸಿ ಮಾತನಾಡಿದರು. ಕಾಯಿಲೆ ಬಂದಾಗ ಎಚ್ಚರ ವಹಿಸಬೇಕು, ಬೇರೆಯವರಿಗೆ ಹರಡದಂತೆ ಗಮನ ಹರಿಸಬೇಕು, ಸರಿಯಾದ ಔಷಧೋಪಚಾರದ ಜೊತೆಗೆ ಪೌಷ್ಟಿಕಾಹಾರ ಸೇವನೆಯ ಮೂಲಕ ರೋಗ ನಿರ್ಮೂಲನೆ ಮಾಡಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಮಾತನಾಡಿ 49 ತಿಂಗಳುಗಳ ಕಾಲ ನಿರಂತರವಾಗಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ಒದಗಿಸುತ್ತಿರುವ ಕೃಷ್ಣ ಕುಮಾರ್ ಪೂಂಜ ಅವರ ಸೇವಾ ಕಾರ್ಯ ದೇವರು ಮೆಚ್ಚುವ ಕಾರ್ಯ ಎಂದು ತಿಳಿಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೇತನ್ ಆರೋಗ್ಯ ಮಾಹಿತಿ ನೀಡಿದರು.


ಯೆನಪೋಯ ಯುನಿವರ್ಸಿಟಿಯ ಪ್ರಾಧ್ಯಪಕಿ ಡಾ. ಅನುಪಮ ನಾಯರ್, ಸಾಮಾಜಿಕ ಕಾರ್ಯಕರ್ತ ಸುನೀಲ್ ಫೆರ್ನಾಡೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 4 ವರ್ಷದಿಂದ ಕ್ಷಯ ರೋಗಿಗಳಿಗೆ ಪೌಷ್ಟಿಕಾಹಾರ ನೀಡುತಿದ್ದು ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಈವರೆಗೆ 264 ಮಂದಿ ಕ್ಷಯ ರೋಗಿಗಳಿಗೆ ಕಿಟ್ ವಿತರಿಸಲಾಗಿದೆ ಎಂದರು.
ಸೇವಾಂಜಲಿ ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರ್ವಹಿಸಿದರು.
Advertisement







