
ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ವತಿಯಿಂದ 15ನೇ ವರ್ಷದ ಸಾಂಸ್ಕೃತಿಕ ಕಲರವ “ರಾರಾಸಂಭ್ರಮ-25” ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗುರುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಬೆಳಿಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಯುವವಾಹಿನಿ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ, ಜೆಸಿಐ ಮಡಂತ್ಯಾರಿನ ಅಧ್ಯಕ್ಷೆ ಸಾಯಿಸುಮ ನಾವಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಸಚಿವರಾದ ಬಿ. ರಮಾನಾಥ ರೈ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಹಾರೈಸಿದರು. ಬಳಿಕ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ನೂರಾರು ಸ್ಪರ್ಧಾಳುಗಳು ಉತ್ಸುಕತೆಯಿಂದ ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬಂತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಂ.ತಾ. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಪುರಂದರ ಎ., ಲಯನ್ಸ್ ಪೂರ್ವಾಧ್ಯಕ್ಷ ಜಯಂತ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ. ರೋಹಿತಾಶ್ವ, ಸುಧೀರ್ ಕುಲಾಲ್, ರಾಜಲಕ್ಷ್ಮೀ ಕಾಂಟ್ರಕ್ಷನ್ಸ್ ಮಾಲಕರಾದ ಗಣೇಶ್ ಕಾಮಾಜೆ, ಜೆಸಿಐ ಬಂಟ್ವಾಳ ದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ನಿನಾದ್ ಕೈರಂಗಳ ಅವರಿಗೆ ರಾರಾಸಂ ಪುರಸ್ಕಾರ ಹಾಗೂ ಪ್ರವೀಣ್ ಕುಮಾರ್ ದೋಟ ಅವರಿಗೆ ಗೌರವಾಭಿನಂದನೆ ನೀಡಿ ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ರಾರಾಸಂ ಫೌಂಡೇಶನ್ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ನಿರ್ದೇಶಕ ದಾಮೋದರ ಏರ್ಯ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಕೇಶವ ಮಾರ್ನಬೈಲು ಕಾರ್ಯಕ್ರಮ ನಿರೂಪಿಸಿದರು.
Advertisement







