
ಬಂಟ್ವಾಳ: ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಓ ಕೆಲಸದಿಂದ ಕೈಬಿಡುವಂತೆ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಆಗ್ರಹಿಸಿದೆ.
ಬುಧವಾರ ಬಿ.ಸಿ.ರೋಡಿನಲ್ಲಿ ಸಂಘದ ಅಧ್ಯಕ್ಷೆ ವಿಜಯವಾಣಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ಅನೇಕ ಮಂದಿ ಅಂಗನವಾಡಿ ಕಾಯಕರ್ತೆಯರು ಬಿಎಲ್ಓಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಉಳಿದ ಕಾರ್ಯಕರ್ತೆಯರಿಗೂ ಅವರ ಗಮನಕ್ಕೆ ಬಾರದೆ ಬಿಎಲ್ಓಗಳಾಗಿ ನೇಮಕ ಮಾಡಲಾಗಿದೆ. ಸಿ ದರ್ಜೆ ನೌಕರರನ್ನು ಬಿಎಲ್ಓಗಳಾಗಿ ನೇಮಿಸಬೇಕೆಂದು ಚುನಾವಣ ಆಯೋಗದಿಂದ ಸೂಚನೆ ಬಂದಿದ್ದು ಈ ಕಾರಣಕ್ಕಾಗಿ ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತಿ ಸಿಬ್ಬಂದಿಗಳನ್ನು ಬಿಎಲ್ಓ ಕೆಲಸದಿಂದ ಮುಕ್ತಗೊಳಿಸಲಾಗಿದೆ. ಆದರೆ ಗೌರವ ಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಓ ಕೆಲಸದಿಂದ ಕೈ ಬಿಡದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಸಿ ದರ್ಜೆ ನೌಕರರೆಂದು ಪರಿಗಣಿಸಿದರೆ ಬಿಎಲ್ಓ ಕೆಲಸ ಮಾಡುವುತ್ತೇವೆ ಎಂದ ಅವರು ಈಗಾಗಲೇ ಪೋಷಣ್ ಟ್ರಾಕರ್ನಲ್ಲಿ ತುಂಬಾ ಕೆಲಸದ ಒತ್ತಡ ಇದ್ದು ಬೇರೆ ಇಲಾಖೆ ಕೆಲಸ ಮಾಡಲು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಕೂಡಲೇ ಬಿಎಲ್ಓ ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕೆಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳಾದ ರೇಣುಕಾ, ಗುಲಾಬಿ, ಯಮುನಾ, ಜಯಶ್ರೀ
ಶ್ರೀವಾಣಿ ಉಪಸ್ಥಿತರಿದ್ದರು.


Advertisement







